

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಕಲ್ಪದೊಂದಿಗೆ ಮಾಡಿದ ಕೆಲಸ ಯಶಸ್ವಿಯಾಗುತ್ತದೆ. ಇಂತಹ ಶಾಲೆಗಳು ತಾಲೂಕುಗಳಿಗೆ ಒಂದೊಂದು ನಿರ್ಮಾಣವಾದರೆ ನಮ್ಮ ಭಾರತೀಯ ಪದ್ಧತಿ, ಸಂಸ್ಕೃತಿ, ಆಚಾರ, ವಿಚಾರ ಉಳಿಯುತ್ತದೆ ಎಂದು ಏಣಿಗಿ ಮಠದ ಶ್ರೀ ವಿರೂಪಾಕ್ಷಯ್ಯ ವೀರಯ್ಯ ಹುಲಿಮಠ ಸ್ವಾಮೀಜಿ ಹೇಳಿದರು.
ಇಲ್ಲಿನ ರಾಷ್ಟ್ರೊತ್ಥಾನ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ತರಗತಿ ಮಕ್ಕಳ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಎಸ್.ಆರ್. ರಾಮನಗೌಡರ ಮಾತನಾಡಿ, ಸಂಕಲ್ಪ ಎನ್ನುವುದು ಜೀವನಕ್ಕೆ ಬೇಕಿರುವ ಒಂದು ಅಂಶ. ಸಂಕಲ್ಪದಲ್ಲಿ ದೊಡ್ಡ ಶಕ್ತಿ ಇದೆ. ಅದನ್ನು ಮರೆಯದೆ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಬಸನಗೌಡ ಮಾತನಾಡಿ, ನಾವು ಮಾಡಿದ ಸಂಕಲ್ಪವನ್ನು ನೆನಪು ಮಾಡಿಕೊಂಡಾಗ ಜೀವನದಲ್ಲಿ ದಾರಿ ತಪ್ಪುವುದಿಲ್ಲ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ದಾಟಿ ಮುಂದೆ ಸಾಗುವುದೇ ಜೀವನ ಎಂದರು.
ವಿದ್ಯಾ ಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ್ ಮಾತನಾಡಿ, ಮಕ್ಕಳ ಹಾಗೂ ಶಾಲೆ ಸಂಬಂಧ ಗಟ್ಟಿಯಾಗಬೇಕು ಎಂಬ ಉದ್ದೇಶಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲೆಯಲ್ಲಿ ಒಳ್ಳೆಯ ಸಂಸ್ಕಾರ ಪಡೆದು ರಾಷ್ಟ್ರಕ್ಕಾಗಿ ದುಡಿಯುವ ಶಕ್ತಿ ನೀವಾಗಬೇಕು ಎಂದರು.
ವಿದ್ಯಾರ್ಥಿಗಳು ಹಾಗೂ ಪಾಲಕರು ಅನಿಸಿಕೆ ಹಂಚಿಕೊಂಡರು. ಮುಖ್ಯಾಧ್ಯಾಪಕ ಮಹಾಂತೇಶ ಮಠಪತಿ ಮಕ್ಕಳಿಗೆ ಸಂಕಲ್ಪ ಬೋಧನೆ ಮಾಡಿದರು.
ಅಶೋಕ ಸೋನಕರ, ಸ್ಥಾಯಿ ಸಮಿತಿ ಸದಸ್ಯರಾದ ಬಸವರಾಜ ಕೌಜಲಗಿ, ವಿನಾಯಕ್ ಭಟ್, ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ, ರೇಖಾ ಅಂಬೇಕರ, ಇತರರು ಇದ್ದರು.
ಶೀಲಾ ಗೌಡರ ಸ್ವಾಗತಿಸಿದರು. ಪಕೀರವ್ವ ಆಯಟ್ಟಿ ನಿರೂಪಿಸಿದರು. ಪೂರ್ಣಿಮಾ ದೊಡ್ಡಮನಿ ವಂದಿಸಿದರು.