

ಹುಣಸೂರು: ಸಕಾರಾತ್ಮಕ ಚಿಂತನೆಗಳಿಂದ ಮಾತ್ರ ಸಾಧನೆ ಸಾಧ್ಯ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಸಂತ ಜೋಸೆಫರ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಫಿಲೋಮಿನಾ ನೊರ‌್ಹೋನಾ ಕಿವಿಮಾತು ಹೇಳಿದರು.
ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 40ನೇ ವರ್ಷಾಚರಣೆ, ಪರಿಸರ ದಿನಾಚರಣೆ ಹಾಗೂ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು. ಮನಸಿದ್ದರೆ ಮಾರ್ಗ ಎನ್ನುವುದು ಹಿರಿಯರ ಮಾತು. ನಾನು ಶಾಲೆಗೆ ಏಕೆ ಬಂದಿದ್ದೇನೆ ಎನ್ನುವುದನ್ನು ವಿದ್ಯಾರ್ಥಿಗಳು ಅರಿತು ಮುನ್ನಡೆಯಬೇಕು. ಋಣಾತ್ಮಕ ಚಿಂತನೆಗಳು ಮನದಲ್ಲಿ ಮೂಡದಿರಲಿ. ಸಾಧಿಸುವೆನೆಂಬ ಛಲ ಮತ್ತು ಶ್ರಮ ಇರಬೇಕು. ಸಕಾರಾತ್ಮಕ ಚಿಂತನೆಯೊಂದಿಗೆ ಬೀಜವನ್ನು ನೆಟ್ಟರೆ ಮುಂದಿನ ದಿನಗಳಲ್ಲಿ ಅದು ಫಲ ಖಂಡಿತ ಲಭಿಸಲಿದೆ ಎಂದರು.
ಸಿಸ್ಟರ್ ಬಿಂದು ಎಲಿಜೆಬೆತ್, ಸಿಸ್ಟರ್ ರೇಷ್ಮಾ ಫರ್ನಾಂಡಿಸ್, ಶಿಕ್ಷಕ ಸೋಮಶೇಖರ್, ಪ್ರಗತಿಪರ ರೈತ ಮಹೇಶ್ ಮಾತನಾಡಿದರು. ಇವೇ ವೇಳೆ ಶಾಲೆಯ ನಿವೃತ್ತ ಶಿಕ್ಷಕ ಪಾಟೀಲ್ ಮತ್ತು ಹಳೇ ವಿದ್ಯಾರ್ಥಿ, ಪತ್ರಕರ್ತ ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.