

ರಬಕವಿ/ಬನಹಟ್ಟಿ: ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಪರಿಶ್ರಮ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಡಾ.ಸಿ.ಎಂ. ಜೋಶಿ ಹೇಳಿದರು.
ರಬಕವಿ-ಹೊಸೂರಿನ ಹಜಾರೆ ೌಂಡೇಷನ್ ಪದ್ಮಾವತಿ ಪಿ.ಯು. ಕಾಲೇಜ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಕಸಾಪ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಉತ್ತಮ ಅಭಿರುಚಿ ನಾಗರಿಕತೆಯ ಹೆಗ್ಗುರುತಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕತೆಯ ಪ್ರತೀಕವಾಗಿರುವ ಕಸಾಪ ತನ್ನ ಸಂಘಟನೆ ಮೂಲಕ ಕನ್ನಡಿಗರ ಮನೆಮನೆಗೆ ತಲುಪಿ ಓದುವ ಅಭಿರುಚಿ ಮೂಡಿಸಲು ಬದ್ಧವಾಗಿದೆ ಎಂದರು.
ತಾಲೂಕು ಮತ್ತು ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ನೀಡುವುದನ್ನು ಸರ್ಕಾರ 2021ರಿಂದ ಸ್ಥಗಿತಗೊಳಿಸಿದ್ದರೂ ಜಿಲ್ಲಾಮಟ್ಟದ ಎರಡು ಮತ್ತು ತಾಲೂಕುಮಟ್ಟದ 10 ಸಾಹಿತ್ಯ ಸಮ್ಮೇಳನಗಳು ಕಳೆದ ಮೂರು ವರ್ಷಗಳಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಆಯೋಜನೆಯಾಗಬೇಕೆಂಬ ಬೇಡಿಕೆ ಹೆಚ್ಚಿದೆ. ಈಗಾಗಲೇ ಶಿಕ್ಷಕರು, ವೈದ್ಯರು, ಪೋಲೀಸರ ಸಮ್ಮೇಳನಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ನ್ಯಾಯವಾದಿಗಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದರು.
ಶಂಕರ ಬೈಚಬಾಳ ಮಾತನಾಡಿ, ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಸಮೃದ್ಧ ಸಿರಿತನದ ಸಾಹಿತ್ಯಗಳಾಗಿದ್ದು, ವಚನ ಸಾಹಿತ್ಯ ಸಂವಿಧಾನದಷ್ಟೇ ಪವಿತ್ರವಾಗಿದ್ದು, ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಪ್ರೊ. ಗಂಗಾಧರ ಅವಟೇರ, ಎಂ.ಎಸ್. ಬದಾಮಿ, ಎಂ.ಕೆ. ಮೇಗಾಡಿ, ವಿ.ಜೆ. ಸಮಾಜ, ಶಿವಾನಂದ ಶೆಲ್ಲಿಕೇರಿ, ಮಲ್ಲೇಶ ಕುಚನೂರ, ಶ್ರೀಶೈಲ ಪಟ್ಟಣಶೆಟ್ಟಿ, ದಾನಪ್ಪ ಆಸಂಗಿ, ಗೌರಿ ಮಿಳ್ಳಿ, ಸವಿತಾ ಹೊಸೂರ, ಮಲ್ಲಪ್ಪ ಗಣಿ, ಮಹಾಶಾಂತ ಶೆಟ್ಟಿ, ಸಿದ್ದಣ್ಣ ಉತ್ನಾಳ, ಈರಣ್ಣ ಗಣಮುಖಿ, ಜಿ.ಎಸ್. ವಡಗಾಂವಿ, ಗಂಗಾಧರ ಮೋಪಗಾರ, ಪ್ರಾಚಾರ್ಯ ಎಸ್.ಎಂ. ಕುಂಬಾರ, ಗುರುನಾಥ ಸುತಾರ, ಮಲ್ಲಿಕಾರ್ಜುನ ಸಜ್ಜನ, ಯೋಗೀಶ ಲಮಾಣಿ ಉಪಸ್ಥಿತರಿದ್ದರು.
ಸಿಬಿಎಸ್‌ಸಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶ್ರೀಶೈಲ ಬುರ್ಲಿ, ದಾಕ್ಷಾಯಣಿ ಮಂಡಿ ನಿರೂಪಿಸಿದರು.