ಸಹಾಯ ಮನೋಭಾವನೆಯಿಂದ ಯಶಸ್ಸು ಸಾಧ್ಯ

Success is possible with a helping spirit
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ಸಭಾಭವನದಲ್ಲಿ ಬ್ಯಾಂಕಿನ ರಜತ ಮಹೋತ್ಸವದ ಕಾರ್ಯಚಟುವಟಿಕೆಗಳ ಉದ್ಘಾಟನೆ, ಬಸವ ಜಯಂತಿ ಆಚರಣೆ, ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಡಾ, ತೊಂಟದ ಸಿದ್ದರಾಮ ಮಹಾಸ್ವಾಮಿಗಳು ಉದ್ಘಾಟಿಸಿದರು. ಎಸ್.ಆರ್.ಪಾಟೀಲ, ಡಾ. ಚಂದ್ರಶೇಖರ ಹೆಗಡೆ, ಸತ್ಯಪ್ಪ ಮೇಲ್ನಾಡ ಮತ್ತಿತರರಿದ್ದರು.
Published on

ಬೀಳಗಿ: ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ಎಲ್ಲರನ್ನು ಸಮನಾಗಿ ಕಂಡು ಅವರಿಗೆ ತಮ್ಮಿಂದಾಗುವ ಸಹಕಾರ ನೀಡಿ, ಇನ್ನೊಬ್ಬರ ಅಭಿವೃದ್ಧಿಗಾಗಿ ದುಡಿಯುವ ಸಂಸ್ಥೆ, ವ್ಯಕ್ತಿ ಎಲ್ಲ ರಂಗದಲ್ಲೂ ಯಶಸ್ಸು ಕಾಣಲು ಸಾಧ್ಯ ಎಂದು ಗದಗ-ಡಂಬಳದ ಎಡೆಯೂರು ತೊಂಟದಾರ್ಯ ಸಂಸ್ಥಾನಮಠದ ಡಾ, ತೊಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಸ್ಥಳೀಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬ್ಯಾಂಕ್‌ನ ರಜತ ಮಹೋತ್ಸವದ ಕಾರ್ಯಚಟುವಟಿಕೆಗಳ ಉದ್ಘಾಟನೆ, ಬಸವ ಜಯಂತಿ ಆಚರಣೆ, ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್.ಆರ್. ಪಾಟೀಲ ಅವರು 1997 ರಲ್ಲಿ ಬೀಳಗಿ ಪಟ್ಟಣದಲ್ಲಿ ಪ್ರಥಮ ಬ್ಯಾಂಕ್ ಆರಂಭ ಮಾಡಿ ಎಲ್ಲರಿಗೂ ಸಹಾಯವಾಗುವಂತೆ ನೋಡಿಕೊಂಡು ಇಂದಿಗೆ 25 ವರ್ಷಗಳಾಗಿ ಯಶಸ್ಸು ಕಂಡಿದ್ದು, ಇಂದು ರಾಜ್ಯಾದ್ಯಂತ ತನ್ನ 18 ಶಾಖೆಗಳನ್ನು ತೆರೆದು ಉತ್ತಮ ಗ್ರಾಹಕ ಸೇವೆ ಒದಗಿಸುತ್ತಿದೆ. ಕಾಯಕವೇ ಕೈಲಾಸ ಎಂದು ತಿಳಿದು ಬ್ಯಾಂಕಿನ ಪದಾಧಿಕಾರಿಗಳು, ಸಿಬ್ಬಂದಿ ನಿರಂತರ ಶ್ರಮ ಹಾಕಿದ್ದರ ಪರಿಣಾಮ ಇಂದು ಬ್ಯಾಂಕು ಉತ್ತಮ ಹೆಸರು ಸಂಪಾದನೆಯ ಜತೆಗೆ ತನ್ನ ಬೆಳ್ಳಿ ಮಹೋತ್ಸವ ಆಚರಿಸುತ್ತಿದೆ ಎಂದರು.

ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು, ಆಯುರ್ವೇದ ಕಾಲೇಜು, ಸಹಕಾರಿ ಕ್ಷೇತ್ರಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಸೌಲಭ್ಯ ನೀಡುವಲ್ಲಿ ಎಸ್.ಆರ್. ಪಾಟೀಲ ಯಶಸ್ಸು ಕಂಡಿದ್ದಾರೆ. ಅವರ ಇಂತಹ ಕಾರ್ಯಗಳು ನಿರಂತರವಾಗಿ ನಡೆಯಲಿ. ಜತೆಗೆ ಬೀಳಗಿ ತಾಲೂಕಿನ ಮತ್ತು ಜಿಲ್ಲೆಯಲ್ಲಿನ ಸಮಗ್ರ ಚಿಂತನೆಗಳನ್ನು ಒಳಗೊಂಡ ಪರಿಶ್ರಮ ಎಂಬ ಸ್ಮರಣ ಸಂಚಿಕೆ ಸಿದ್ದವಾಗುತ್ತಿದ್ದು ಎಲ್ಲ ಮಾಹಿತಿಯೂ ಅದರಲ್ಲಿ ಸಿಗಲಿದೆ ಎಂದರು.

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಯಾವುದೇ ವಾಣಿಜ್ಯ ಸಂಸ್ಥೆ ಇಲ್ಲದೆ ಇರುವಾಗ ಕೇವಲ 1100600 ರೂ. ಶೇರು ಬಂಡವಾಳದೊಂದಿಗೆ ಸಂಸ್ಥೆ ಆರಂಭಗೊಂಡು, ಇಂದು ಶತಮಾನ ಕಂಡ ಬ್ಯಾಂಕುಗಳ ಸಾಲಿನಲ್ಲಿ 2ನೇ ಸ್ಥಾನಕ್ಕೆ ತಲುಪಿದೆ ಎಂದರು.

ಈ ಆಚರಣೆ ನಿಮಿತ್ಯ 25 ವಿಶೇಷ ಕಾರ್ಯಚಟುವಟಿಕೆಗಳನ್ನು ಹಾಕಿಕೊಂಡಿದ್ದು, ಜನರಿಗೆ ಉತ್ತಮ ಸಂದೇಶ ನೀಡಲು ಮೂಡನಂಬಿಕೆ, ಅಂಧಶ್ರದ್ಧೆ ಹೋಗಲಾಡಿಸುವ ನಿಟ್ಟಿನಲ್ಲಿ ಹುಲಿಕಲ್ ನಟರಾಜ ಅವರಿಂದ ಪವಾಡ ಬಯಲು ಕಾರ್ಯಕ್ರಮ, ಸಾಹಿತ್ಯ ಉತ್ಸವ, ಕವಿಗೋಷ್ಠಿ, ಸಹಕಾರ ಗೋಷ್ಠಿ, ಜಾನಪದ ಉತ್ಸವ, ಹಾಸ್ಯ ಸಂಜೆ, ಮಹಿಳೆಯರಿಗಾಗಿ ವಚನ ಗಾಯನ ಹಿಡಿದು ವಿವಿಧ ತರಬೇತಿಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಬದಾಮಿ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಡಾ. ಚಂದ್ರಶೇಖರ ಹೆಗಡೆ ಉಪನ್ಯಾಸ ನೀಡಿದರು. ವಚನಗಾಯನ ಸ್ಪರ್ದೆಯಲ್ಲಿ ಸ್ಥಾನ ಪಡೆದ ಮಕ್ಕಳು ಮತ್ತು ಮಹಿಳೆಯರಿಗೆ ಬಹುಮಾನ ನೀಡಲಾಯಿತು. ಬ್ಯಾಂಕ್ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಪ್ರದಾನ ವ್ಯವಸ್ಥಾಪಕ ಎಲ್.ಬಿ. ಕುರ್ತಕೋಟಿ, ಬಸವ ಬಳಗದ ಅಧ್ಯಕ್ಷ ಶಿವಾನಂದ ಸಾರಾವರಿ, ಉಪ ಪ್ರಧಾನ ವ್ಯವಸ್ಥಾಪಕ ಬನ್ನಟ್ಟಿ ಗುರುರಾಜ ಲೂತಿ, ಎಂ.ಎಲ್. ಕೆಂಪಲಿಂಗಣ್ಣವರ, ಕೆ.ಎಸ್.ಪತ್ರಿ, ಹೇಮಾದ್ರಿ ಕೊಪ್ಪಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net