ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

IMG20250602205531.jpg
Published on

ಬೆಳಗಾವಿ: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ನಿರ್ದಿಷ್ಟ ಗುರಿ, ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮ ಇರಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ ಅಭಿಪ್ರಾಯಪಟ್ಟರು.

ನಗರದ ಮಿಲೇನಿಯಂ ಗಾರ್ಡನ್‌ನಲ್ಲಿ ಜೈನ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಝೇಶನ್ (ಜಿತೋ) ವತಿಯಿಂದ 2025ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಜೈನ ಸಮುದಾಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 12ನೇ ಆವೃತ್ತಿಯ ವಿದ್ಯಾರ್ಥಿವೇತನದ (ಸ್ಕಾಲರ್‌ಶಿಪ್) ಚೆಕ್ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಪಾಲಕರು ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಕಷ್ಟ ಪಡುತ್ತಾರೆ. ತಂದೆ-ತಾಯಿ ಶ್ರಮ ಅರಿತು ಉತ್ತಮವಾಗಿ ಓದಬೇಕು ಎಂದು ತಿಳಿಸಿದರು.

ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ, ಜಿತೋ ಸಂಸ್ಥೆಯ ಸದಸ್ಯರು ತನು-ಮನ ಧನದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ. ಜಿತೋ ಸಂಸ್ಥೆಯ ಕಾರ್ಯ ಇತರ ಸಾಮಾಜಿಕ ಸಂಸ್ಥೆಗಳಿಗೆ ಮಾದರಿ. ಈ ಸಂಸ್ಥೆಯ ಮಾಡುತ್ತಿರುವ ಕಾರ್ಯವನ್ನು ಎಲ್ಲ ಸಂಘ-ಸಂಸ್ಥೆಗಳೂ ಮಾಡಬೇಕು ಎಂದರು.

ಉದ್ಯಮಿ ಶಾಂತಿಲಾಲಜಿ ಪೋರವಾಲ ಮಾತನಾಡಿ, ಶಿಕ್ಷಣ ಪಡೆಯುವುದು ಇಂದು ಅವಶ್ಯ. ಉನ್ನತ ಶಿಕ್ಷಣ ಪಡೆದು ಸಮಾಜದ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಜೈನ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಒಟ್ಟು 157 ವಿದ್ಯಾರ್ಥಿಗಳಿಗೆ ತಲಾ 7 ಸಾವಿರ ರೂ.ಗಳಂತೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಯೋಜನೆಯ ಮುಖ್ಯ ರೂವಾರಿ ಪೋರವಾಲ ಪರಿವಾರ ಮತ್ತು ಇತರ ದಾನಿಗಳು ಹಾಗೂ ಜಿತೋ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರಮೋದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿತೋ ಸದಸ್ಯ ಕುಂತಿನಾಥ ಕಲಮನಿ ಜಿತೋ ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಭಿಜಿತ್ ಭೋಜನ್ನವರ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಭಯ ಆದಿಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net