ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

02 CRP-1A
ಚನ್ನರಾಯಪಟ್ಟಣದ ನವೋದಯ ವಿದ್ಯಾ ಸಂಸ್ಥೆ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಚಂದ್ರಶೇಖರ್ ಗುರೂಜಿ ಉದ್ಘಾಟಿಸಿದರು.ಪ್ರೊ.ಎಚ್.ಸಿದ್ದೇಗೌಡ, ಸಂಜಯ್‌ಕುಮಾರ್, ಸಿ.ಜೆ.ಮಂಜುನಾಥ್, ಡಾ.ಪ್ರಮೋದ್ ಇತರರಿದ್ದರು.
Published on

ಚನ್ನರಾಯಪಟ್ಟಣ : ವಿದ್ಯಾರ್ಥಿಗಳು ಮೇಲು, ಕೀಳು, ಬಡವ, ಬಲ್ಲಿದ ಎಂಬ ಭಾವನೆ ಬದಿಗಿಟ್ಟು ಓದನ್ನಷ್ಟೇ ತಮ್ಮ ಕಾಯಕವೆಂದು ಭಾವಿಸಿ ಕಠಿಣ ಪರಿಶ್ರಮದೊಂದಿಗೆ ಮುಂದಾದಾಗ ಮಾತ್ರ ಯಶಸ್ಸಿನ ಗುರಿ ಮುಟ್ಟಲು ಸಾಧ್ಯ ಎಂದು ಮೇಳಿಯಮ್ಮ ಅಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್ ಗುರೂಜಿ ತಿಳಿಸಿದರು.

ಚನ್ನರಾಯಪಟ್ಟಣ ತಾಲೂಕಿನ ನವೋದಯ ವಿದ್ಯಾಸಂಸ್ಥೆಯ ವತಿಯಿಂದ 2026-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳು ಆತ್ಮಸ್ಥೈರ್ಯ ತಮ್ಮ ಶಕ್ತಿ, ಯುಕ್ತಿಯೊಂದಿಗೆ ಸಂಕುಚಿತ ಮನೋಭಾವ ತಂದುಕೊಂಡರಷ್ಟೇ ಆತ ಬಡವನಾಗಲು ಸಾಧ್ಯ. ಸರಸ್ವತಿಗೆ ಎಲ್ಲರೂ ಒಂದೇ. ನಿರಂತರ ಓದಿನೊಂದಿಗೆ ಶ್ರಮಪಟ್ಟ ಮಕ್ಕಳಿಗೆ ಆಕೆ ಒಲಿಯುತ್ತಾಳೆ ಎಂದರು.

ಮಕ್ಕಳು ನಾಡಿನ ಪ್ರಾಮಾಣಿಕ ಪ್ರಜ್ಞಾವಂತ ಪ್ರಜೆ ಆಗಬೇಕಾದರೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಜೀವನವನ್ನು ಕಟ್ಟಿಕೊಡುವ ಕೆಲಸಗಳಾಗಬೇಕು. ಇದಾಗದಿದ್ದಾಗ ಮಕ್ಕಳು ಯಾರ ಅಂಕೆಗೂ ಸಿಗದೇ ಗುರು ಹಿರಿಯರಿಗೆ ಗೌರವ ನೀಡದೆ, ಶಿಕ್ಷಕರ ಮಾತಿಗೆ ಮನ್ನಣೆ ನೀಡದೇ ತಮ್ಮಿಷ್ಟದ ರೀತಿ ನಡೆಯುತ್ತಾರೆ ಎಂದು ತಿಳಿಸಿದರು.

ಜಗತ್ತಿನಲ್ಲಿ ಭೂಮಿ, ತಾಯಿ-ತಂದೆ, ಶಿಕ್ಷಕರ ಋಣವನ್ನ ಪಡೆದ ಮಕ್ಕಳು ಉತ್ತಮ ಪ್ರಜೆಗಳಾಗಿ ಅವರ ಋಣ ತೀರಿಸುವ ಕೆಲಸವಾಗಬೇಕು. ಪ್ರತಿ ವರ್ಷ ಹೊಸ ಉದಯಕ್ಕೆ ಕಾರಣವಾಗಿರುವ ನವೋದಯ ಸಂಸ್ಥೆಯಲ್ಲಿ ಓದುತ್ತಿರುವ ತಾವುಗಳು ಉತ್ತಮ ಅಂಕಗಳಿಕೆಯೊಂದಿಗೆ ಶಾಲೆಗೆ ಕೀರ್ತಿ ತಂದು ಆಡಳಿತ ಮಂಡಳಿಯ ಶ್ರಮಕ್ಕೆ ಸಾರ್ಥಕತೆ ತರಬೇಕೆಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಸಿದ್ದೇಗೌಡ ಮಾತನಾಡಿ, ನವೋದಯ ವಿದ್ಯಾ ಸಂಸ್ಥೆಯಲ್ಲಿ ಗತಕಾಲದ ವೈಭವ ಮರುಕಳಿಸುವ ದಿನಗಳು ಹತ್ತಿರವಾಗುತ್ತಿವೆ. ಗುಣಾತ್ಮಕ, ಮೌಲ್ಯಯುತ ಶಿಕ್ಷಣಕ್ಕೆ ನವೋದಯ ವಿದ್ಯಾ ಸಂಸ್ಥೆಯ ಪ್ರಸಕ್ತ ಆಡಳಿತ ಮಂಡಳಿ ಮುಂದಾಗಿದೆ. ಒಂದು ಸಂಸ್ಥೆಯು ಗಟ್ಟಿಯಾಗಿ ನಿಲ್ಲಬೇಕಾದರೆ ಆಡಳಿತ ಮಂಡಳಿಯೊಂದಿಗೆ ಶಿಕ್ಷಕರು, ಸಿಬ್ಬಂದಿ ಜತೆಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಶರತ್‌ಕೆಂಬಾಳ್ 2025-26 ನೇ ಸಾಲಿನ ಯೋಜನೆಗಳು, ಕಾರ್ಯ ಸಿದ್ಧತೆ ಕುರಿತು ಸಭೆಗೆ ಮಾಹಿತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ಸಂಜಯ್‌ಕುಮಾರ್, ಆಡಳಿತ ಮಂಡಳಿ ಅಧ್ಯಕ್ಷ ಸಿ.ಜೆ.ಮಂಜುನಾಥ್, ಉಪಾಧ್ಯಕ್ಷ ಡಾ.ಪ್ರಮೋದ್,ಖಜಾಂಚಿ ಜಲೇಂದ್ರ, ಸಹ ಕಾರ್ಯದರ್ಶಿ ಮರುವನಹಳ್ಳಿ ಸಂತೋಷ್, ನಿರ್ದೇಶಕರಾದ ಒ.ಆರ್.ರಂಗೇಗೌಡ, ಆನಂದ್ ಕಾಳೇನಹಳ್ಳಿ, ಗಿರೀಶ್, ಸಿ.ಟಿ.ಕುಮಾರಸ್ವಾಮಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net