

ಮುಂಡರಗಿ: ಕ್ರೀಡಾಪಟುಗಳಿಗೆ ಸೋಲು- ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ‘ಗೆದ್ದೇ ಗೆಲ್ಲುವೆ ಒಂದು ದಿನ’ ಎನ್ನುವ ವಿಶ್ವಾಸವಿರಬೇಕು. ಕ್ರೀಡಾಪಟುಗಳು ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಕ್ರೀಡಾ ವಿಭಾಗದ ನಿರ್ದೇಶಕ ಡಾ. ಬಿ.ಎಂ. ಪಾಟೀಲ ಹೇಳಿದರು.
ಪಟ್ಟಣದ ಕೆ.ಆರ್. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ಪುರುಷರ ವಾಲಿಬಾಲ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿ ಪಂದ್ಯಾವಳಿಗೆ ಚಾಲನೆ ನೀಡಿದ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಸಾಧನೆಯಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಕ್ರೀಡಾ ಕ್ಷೇತ್ರದ ಸಾಧನೆ ಕಡಿಮೆ ಇತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಖೇಲೋ ಇಂಡಿಯಾ ಜಾರಿಗೆ ತಂದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಸಾಧನೆ ಮಾಡಲು ಅನುಕೂಲವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್. ಪೊಲೀಸ ಪಾಟೀಲ, ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ, ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಇಮ್ತಿಯಾಜ ಅಹಮ್ಮದ ಮಾತನಾಡಿದರು. ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಪ್ರಾಚಾರ್ಯ ಡಾ. ಡಿ.ಸಿ. ಮಠ, ಎಂ.ಎಸ್. ಶಿವಶೆಟ್ಟರ, ಅಶೋಕ ಅಂಗಡಿ, ಎಸ್.ಬಿ.ಹಿರೇಮಠ, ಟಿ.ಬಿ. ದಂಡಿನ, ಶಿವರಾಜಸ್ವಾಮಿ, ಮಂಜುನಾಥ ಮುಧೋಳ, ಇತರರಿದ್ದರು.
ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಮಟಾದ ಎ.ವಿ. ಬಾಳಿಗಾ ಕಾಲೇಜು ಪ್ರಥಮ ಸ್ಥಾನ ಪಡೆದರೆ, ಶಿರಸಿಯ ಸರ್ಕಾರಿ ಕಾಲೇಜು ದ್ವಿತೀಯ ಸ್ಥಾನ ಪಡೆದಿದೆ. ಧಾರವಾಡದ ಸರ್ಕಾರಿ ಪದವಿ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿದೆ.