

ನರೇಗಲ್ಲ: ಪ್ರತಿಯೊಬ್ಬ ವಿದ್ಯಾರ್ಥಿಗೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಯಶಸ್ಸು ಸಾಧ್ಯ. ಅದಕ್ಕಾಗಿ ಎಲ್ಲ ವಿದ್ಯಾರ್ಥಿಗಳು ಛಲ ಬಿಡದೆ ಸತತ ಪ್ರಯತ್ನದಿಂದ ಅಭ್ಯಾಸದಲ್ಲಿ ಕರಗತಗೊಳಿಸಿಕೊಳ್ಳಬೇಕು ಎಂದು ಡಾ. ಕೆ.ಬಿ. ಧನ್ನೂರ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಪ್ರಾಥಮಿಕ (ಅಪ್ಪಣ್ಣವರ) ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗುರಿ ಏನೆಂಬುದನ್ನು ಇಟ್ಟುಕೊಂಡು ಮುನ್ನಡೆಯಬೇಕು. ವಿದ್ಯಾರ್ಥಿಯಾದವರು ವಿದ್ಯಾಭ್ಯಾಸದೊಂದಿಗೆ ಯಶಸ್ವಿಯಾಗಿ ಸಾಧನೆ ಮಾಡುತ್ತ ಮಹತ್ವದ ಗುರಿ ಹೊಂದಿ ಹಿಂದೆ ಗುರಿವಿನ ಆಶೀರ್ವಾದದೊಂದಿಗೆ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷೆ ನೇತ್ರಾ ಅಪ್ಪಣ್ಣವರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇದ್ದರೆ ಯಶಸ್ಸು ಸಾಧಿಸಬಹುದು. ನಿಜವಾದಂತಹ ಶಿಕ್ಷಕನು ಜ್ಞಾನ ಸಂಗ್ರಹಿಸಿ ಅದನ್ನು ಮಕ್ಕಳ ಹೃದಯದಲ್ಲಿ ತುಂಬುವ ಮಹಾನ್ ಸಾಧಕ. ಅಂತಹ ನಿಜವಾದ ಗುರು ಹಾಗೂ ಜ್ಞಾನವನ್ನು ಪಡೆದ ನೀವು ಧನ್ಯರು. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಸಾಧನೆ ಮಾಡಿ ಅವರ ಸಾಧನೆಗೆ ಬೆನ್ನೆಲುಬಾದ ಶಿಕ್ಷಕರನ್ನು ನೆನೆಯುವ ಕ್ಷಣ ಅವಿಸ್ಮರಣೀಯ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಗನಗೌಡ ಚನ್ನಪ್ಪಗೌಡ್ರ, ರೇವಣೆಪ್ಪ ಯಲಬುರ್ಗಿ, ರಘುನಾಥ ಕೊಂಡಿ, ಹಟೇಸ್ಸಾಬ್ ಲತೀಫ್ಸಾಬನವರ, ಶಿಕ್ಷಕರಾದ ಸುಜಾತಾ ಚಿಂಚಲಿ, ಶಹಜಾನ್ಬೆಗಂ ದರಗಾದ, ಸ್ನೇಹಲತಾ ಸಾಲಿಮಠ, ಸೀಮಾ ಕೊಂಡಿ, ಇತರರಿದ್ದರು.