ವಿವೇಕದಿಂದ ನಡೆದರೆ ಯಶಸ್ಸು ಸಾಧ್ಯ

3 nrgl 1
Published on

ನರೇಗಲ್ಲ: ಜ್ಞಾನ ಮತ್ತು ವಿವೇಕ ಎರಡೂ ಒಂದೇ ಅಲ್ಲ. ಎರಡಕ್ಕೂ ಬಹಳಷ್ಟು ವ್ಯತ್ಯಾಸವಿದ್ದು, ಅದನ್ನು ತಿಳಿದು ನಡೆದರೆ ಜೀವನದಲ್ಲಿ ಖಂಡಿತ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ ಶಶಿಧರ ಮೂಲಿಮನಿ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಆಯೋಜಿಸಿದ್ದ 54ನೇ ಶಿವಾನುಭವ ಗೋಷ್ಠಿಯಲ್ಲಿ ಯಶಸ್ಸು ಮತ್ತು ಸಾತ್ವಿಕ ಜೀವನ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜ್ಞಾನಕ್ಕೆ ನಾನು ಸಾಧಿಸಿದೆ ಎಂಬ ಹಮ್ಮಿರುತ್ತದೆ. ಆದರೆ, ವಿವೇಕಕ್ಕೆ ಈ ಹಮ್ಮು ಇರುವುದಿಲ್ಲ. ವಿವೇಕಿಗಳು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಆದರೆ, ಜ್ಞಾನವು ಒಮ್ಮೊಮ್ಮೆ ಸೋಲುತ್ತದೆ. ಅದಕ್ಕೆ ಅದರ ಅಹಂಕಾರ ಕಾರಣವಾಗುತ್ತದೆ. ಜ್ಞಾನವಂತರಾಗುವುದರ ಜತೆಗೆ ಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ವಿವೇಕವನ್ನು ಹೊಂದುವುದು ಅಷ್ಟೇ ಮುಖ್ಯ. ವಿವೇಕದಿಂದ ಬದುಕಿ ಜಗತ್ತನ್ನು ಬೆಳಗಿದ ಮೂವರು ಮಹನೀಯರು ನಮ್ಮ ಕಣ್ಣ ಮುಂದೆ ಆಗಿ ಹೋಗಿದ್ದಾರೆ. ಒಬ್ಬರು ದಾಸೋಹ ಯೋಗಿಗಳು ತುಮಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳು, ಸಂಗೀತಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು ಮತ್ತು ಜ್ಞಾನಯೋಗಿ ಶ್ರೀ ಸಿದ್ಧೇಶ್ವರಸ್ವಾಮಿ ಎಂದರು.

ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ದೇವರು ಕೊಟ್ಟ ಅವಕಾಶ ಸಮರ್ಪಕವಾಗಿ ಬಳಸಿಕೊಳ್ಳುವುದು ಸಾತ್ವಿಕ ಜೀವನದ ಮುಖ್ಯ ಲಕ್ಷಣ. ಪರಿಸರವನ್ನು ಕೆಡಿಸದೆ ಉಪಯೋಗಿಸಿ ಅದನ್ನು ಇತರರಿಗೂ ಉಪಯೋಗಿಸಲು ಬಿಡುವುದೂ ಸಾತ್ವಿಕ ಜೀವನ ಎಂದರು.

ಉಪನ್ಯಾಸಕ ಎಫ್.ಎನ್. ಹುಡೇದ, ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ಶಿಕ್ಷಕ ತೋಟಪ್ಪ ಆಡೂರ, ಪ.ಪಂ. ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಪೂಜಾ ಗ್ರಾಮಪುರೋಹಿತ, ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಯ್ಯ ಗುಂಡಗೋಪುರಮಠ ಅವರನ್ನು ಶ್ರೀಗಳು ಸನ್ಮಾನಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಪ್ರಾಚಾರ್ಯ ವೈ.ಸಿ. ಪಾಟೀಲ ಸ್ವಾಗತಿಸಿದರು. ಶಿಕ್ಷಕ ಕೆ.ಐ. ಕೋಳಿವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net