ಒಗ್ಗಟ್ಟಿನಿಂದ ನಡೆದಾಗ ಯಶಸ್ಸು ಸಿದ್ಧಿ

FotoJet (4)
Published on

ವಿಧಾನ ಪರಿಷತ್​ ಸದಸ್ಯ ಟಿ.ಡಿ.ಶ್ರೀನಿವಾಸ್​ ಹೇಳಿಕೆ | ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ

 ಗುಬ್ಬಿ: ನಾವೆಲ್ಲಾ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ರಾಜಕೀಯವಾಗಿ ನಮಗೆ ಶಕ್ತಿ ಬರಲು ಸಾಧ್ಯ ಎಂದು ವಿಧಾನ ಪರಿಷತ್​ ಸದಸ್ಯ ಟಿ.ಡಿ.ಶ್ರೀನಿವಾಸ್​ ಹೇಳಿದರು.

ಪಟ್ಟಣದ ಎಸ್​ವಿಎಸ್​ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಡುಗೊಲ್ಲ ಸಮುದಾಯಕ್ಕೆ ಕೇಂದ್ರ ಸರ್ಕಾರದಲ್ಲಿ ಎಸ್​ಟಿ ಮೀಸಲಾತಿ ಸಿಗಬೇಕೆಂದು ದೊಡ್ಡಮಟ್ಟದಲ್ಲಿ ನಾವೆಲ್ಲರೂ ಹೋರಾಟ ಮಾಡಿದ್ದೇವೆ. ಅದನ್ನು ಕೆಲವರು ಬೇರೆ ರೀತಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶೋಚನಿಯ ಎಂದು ಬೇಸರ ವ್ಯಕ್ತಪಡಿಸಿದರು.

ಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಪ್ರಧಾನ ಅರ್ಚಕ ಪಾಪಣ್ಣ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಿನಿಂದ ಸಂಘಟನೆಯನ್ನು ಮಾಡಿಕೊಂಡಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ನಮ್ಮ ನಮ್ಮಲ್ಲೇ ಕಚ್ಚಾಟ, ಕಿತ್ತಾಟ ಶುರುವಾದರೆ ಸಂಘಟನೆಯನ್ನು ಹಾಗೂ ಸಮುದಾಯವನ್ನು ಅಭಿವೃದ್ಧಿ ಪಥಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ತಾಲೂಕು ಯಾದವ ಸಂಘದ ಅಧ್ಯಕ್ಷ ಜಿ.ಎನ್​.ಬೆಟ್ಟಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಕೆಲವು ಬುರುಡೆ ಬಿಡುವವರು ಸೇರಿಕೊಂಡು ಕೃಷ್ಣ ನಮ್ಮ ದೈವವೇ ಅಲ್ಲ ಎಂಬುದನ್ನು ಹೇಳುತ್ತಿರುವುದನ್ನು ನೋಡಿದಾಗ ಇದೊಂದು ಬುರುಡೆ ಗ್ಯಾಂಗ್​ ಆಗಿದೆ. ಕೃಷ್ಣ ಜನ್ಮಾಷ್ಟಮಿ ಮಾಡಬೇಕೆಂದು ಎಂದು ನಿರ್ಧಾರವಾದರೆ ಕೆಲವರು ಅದನ್ನು ಹಾಳು ಮಾಡುವ ಕೆಲಸಕ್ಕೂ ಮುಂದಾಗಿದ್ದಾರೆ. ಎಲ್ಲರೂ ಅರ್ಥ ಮಾಡಿಕೊಳ್ಳಿ ಸಂಘಟನೆ ಇದ್ದಾಗ ಮಾತ್ರ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ಕೃಷ್ಣ ಡೆವಲಪ್​ಮೆಂಟ್​ ಫೌಂಡೇಷನ್​ ಗೌರವಾಧ್ಯಕ್ಷ ರಘು ಮಾತನಾಡಿ, ಒಂದು ಕಾರ್ಯಕ್ರಮ ಮಾಡುವ ಉದ್ದೇಶವೇ ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡು ಕಾರ್ಯಕ್ರಮಗಳಿಗೆ ಆಗಮಿಸಿ, ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.

ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಕಲ್ಯಾಣ ಮಂಟಪದವರೆಗೆ ಕೃಷ್ಣನ ಭಾವಚಿತ್ರದೊಂದಿಗೆ ಮೆರವಣಿಗೆ ಆಯೋಜಿಸಲಾಗಿದೆ. ಜೆಡಿಎಸ್​ ಮುಖಂಡ ಬಿ.ಎಸ್​.ನಾಗರಾಜು, ಕಳ್ಳಿಪಾಳ್ಯ ಲೊಕೇಶ್​, ಯೋಗಾನಂದ ಕುಮಾರ್​, ಚಲನಚಿತ್ರ ನಿರ್ದೇಶಕ ಕೀರ್ತಿ ಕುಚೇಲ, ರಾಜ್ಯ ಯಾದವ ಸೇನೆಯ ಅಮ್ಮನ ಹಟ್ಟಿ ಹರೀಶ್​, ಗುಬ್ಬಿ ಹಟ್ಟಿ ಮಹಾಲಿಂಗಯ್ಯ ಸೇರಿದಂತೆ ಸಂಘದ ಎಲ್ಲ ಪದಾಧಿಕಾರಿಗಳು ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net