

ರಟ್ಟಿಹಳ್ಳಿ: ಕಾಯಕವೇ ಕೈಲಾಸ ಎಂಬಂತೆ ಪ್ರತಿಯೊಬ್ಬ ಮನುಷ್ಯನಿಗೂ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ಶ್ರದ್ಧೆ-ನಿಷ್ಠೆ ಮತ್ತು ಗೌರವ ಇರಬೇಕಾಗುತ್ತದೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಸುಮಾರು 18 ವೃತ್ತಿಗಳಿಗೆ ತರಬೇತಿ ನೀಡಿ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನು ಸದೃಢಗೊಳಿಸಲಾಗುತ್ತಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ತಾಲೂಕಿನ ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದಲ್ಲಿ ಹಿರೇಕೆರೂರ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಆಯೋಜಿಸಿದ್ದ ಬಡಿಗೇರ ವೃತ್ತಿ ತರಬೇತಿ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಯೋಜನೆಯಿಂದ ತಳಮಟ್ಟದ ಕರಕುಶಲ ವೃತ್ತಿಗಳನ್ನು ಗುರುತಿಸಿ ಉತ್ತೇಜಿಸುವ ಕಾರ್ಯವಾಗಿದೆ. ಉತ್ತಮ ತರಬೇತಿ ಪಡೆದುಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ತರಬೇತಿ ಕೇಂದ್ರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಕೇಶವಿನ್ಯಾಸಕರು, ಬಡಿಗೇರ ಮತ್ತು ದೋಬಿ ಒಟ್ಟು 3 ವೃತಿ ತರಬೇತಿ ನೀಡಿ ಪ್ರಮಾಣಪತ್ರ ನೀಡಲಾಗುತ್ತಿದೆ. 400ಕ್ಕೂ ಹೆಚ್ಚು ಕರಕುಶಲಗಾರರಿಗೆ ತರಬೇತಿ ನೀಡಲಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ತರಬೇತಿ ನೀಡಿರುವ ಹೆಗ್ಗಳಿಕೆಗೆ ಈ ಕೇಂದ್ರ ಪಾತ್ರವಾಗಿದೆ ಎಂದರು.
ಜಿಲ್ಲಾ ಕೌಶಲ ಅಧಿಕಾರಿ ಸಂಜಯ ಕೋರೆ, ಪ್ರಾಚಾರ್ಯ ಎಸ್.ಪಿ. ಗೌಡರ, ಜಿಪಂ ಮಾಜಿ ಸದಸ್ಯ ಮಹಾಂತೇಶ ಸೊಪ್ಪಿನ, ತರಬೇತಿದಾರರಾದ ಗೀತಾ ಕರಿಗಾರ, ಸುಜಾತ ಬಳಲು, ಇತರರು ಉಪಸ್ಥಿತರಿದ್ದರು.