ಅನ್ವೇಷಣೆ-ನರ್ಸರೀಸ್ ಆಫ್ ಟ್ಯಾಲೆಂಟ್ ಕಾರ್ಯಕ್ರಮದಿಂದ ಕಲಿಕೆಯಲ್ಲಿ ಯಶಸ್ಸು ಸಾಧ್ಯ

anveshana karyakrama
Published on

ಮಡಿಕೇರಿ: ಅನ್ವೇಷಣೆ-ನರ್ಸರೀಸ್ ಆಫ್ ಟ್ಯಾಲೆಂಟ್ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಗಣಿತ ಮತ್ತು ವಿಜ್ಞಾನದ ವಿಷಯದ ಕಲಿಕೆಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲು ಸಹಕಾರಿಯಾಗಲಿದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಖಜಾಂಚಿ ಡಾ.ಕೆ.ಎನ್.ಚಂದ್ರಶೇಖರ್ ಹೇಳಿದರು.


ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಅನ್ವೇಷಣೆ-ನರ್ಸರೀಸ್ ಆಫ್ ಟ್ಯಾಲೆಂಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಟ್ಯಾಲೆಂಟ್ ಕಾರ್ಯಕ್ರಮದ ಉದ್ದೇಶವಾಗಿದೆ. ಪಾಠ ನಿಮಗೆ ಪ್ರಮಾಣ ಪತ್ರ ನೀಡುವುದರ ಜತೆಗೆ ಒಳ್ಳೆಯ ಕೆಲಸ ಸಿಗುವಂತೆ ಮಾಡುತ್ತದೆ. ಆದರೆ, ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.


ಸಾಧನೆಗೆ ಯಾವುದೂ ಕೂಡಾ ಅಡ್ಡಿ ಬರುವುದಿಲ್ಲ. ನಾವು ಮನಸ್ಸು ಮಾಡಬೇಕಷ್ಟೇ. ಇಲ್ಲದಿರುವ ವ್ಯವಸ್ಥೆಗಳ ಕುರಿತು ಚಿಂತಿಸದೇ ಇರುವ ವ್ಯವಸ್ಥೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆ ಒದಲು ಸಾಕಷ್ಟು ಪುಸ್ತಕಗಳಿವೆ. ನಾವು ತಲೆ ತಗ್ಗಿಸಿ ಪುಸ್ತಕ ಓದಿದರೆ ಪುಸ್ತಕವು ನಮ್ಮನ್ನು ತಲೆ ಎತ್ತಿ ಬೆಳೆಸುತ್ತದೆ. ಪುಸ್ತಕವನ್ನು ಓದುವುದರಿಂದ ನಮಗೆ ಸಾಕಷ್ಟು ಜ್ಞಾನ ಬೆಳೆಯುತ್ತದೆ. ವಿದ್ಯೆ ಎನ್ನುವುದು ಸಾಧಕರ ಸ್ವತ್ತು, ಸೋಮಾರಿಯ ಸ್ವತ್ತಲ್ಲ ಎಂದು ತಿಳಿಸಿದರು.


ಕೊಡಗು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಯೋಜನಾ ಉಪ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಅನ್ವೇಷಣೆ ಕಾರ್ಯಕ್ರಮ ಇಂದಿನ ಮಕ್ಕಳ ಅದೃಷ್ಟವಾಗಿದೆ. ನಾವು ಓದುವ ಸಮಯದಲ್ಲಿ ಆನ್‌ಲೈನ್ ಕ್ಲಾಸಸ್‌ಗಳನ್ನು ನೋಡಿಲ್ಲ. ಆದರೆ, ನೀವು ಎಷ್ಟೋ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಒಳ್ಳೆಯ ಅತಿಥಿಗಳು ಮಾತನಾಡುವುದನ್ನು ನೀವು ಕಣ್ಣಾರೆ ನೋಡಲು ಹಾಗೂ ಅವರೊಂದಿಗೆ ಸಂವಹನ ಮಾಡುವುದನ್ನು ನೋಡಿ ಬಹಳ ಸಂತೋಷವಾಗುತ್ತಿದೆ. ಎಸ್.ವಿ.ವೈ.ಎಮ್ ಸಂಸ್ಥೆ ನೀಡಿರುವ ಸೌಲಭ್ಯಗಳನ್ನು ಮತ್ತು ಪ್ರಯೋಜನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆದುಕೊಳ್ಳುವಂತಾಗಬೇಕೆಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಆರ್.ಜನಾರ್ಧನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕಿನ ಶಿಕ್ಷಣ ಸಂಯೋಜನಾಧಿಕಾರಿ ಹರೀಶ್, ಕರಿಕೆ ಸರ್ಕಾರಿ ಪ್ರೌಢಶಾಲಾ ಎಸ್.ಡಿ.ಎಮ್.ಸಿ ಸದಸ್ಯರಾದ ಸತ್ಯನಾಥ್ ಹಾಗೂ ಮುಖ್ಯ ಶಿಕ್ಷಕ ರಾಜಶೇಖರ್ ಮತ್ತು ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net