ಪ್ರಕರಣದ ಚಾರ್ಜ್‌ಶೀಟ್ ಜತೆ ಸಾಕ್ಷಿ ತಾಳೆಯಾದರೆ ಯಶಸ್ಸು

work shop
ಎಸ್ಪಿ ಕಚೇರಿಯಲ್ಲಿ ತನಿಖಾ ಸಹಾಯಕರಿಗೆ ಏರ್ಪಡಿಸಿದ್ದ ತನಿಖೆ ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಬಿ.ಪುಷ್ಪಾಂಜಲಿ, ಎಸ್.ಎನ್.ಹಿರೇಮನಿ, ಕೃಷ್ಣಮೂರ್ತಿ, ಪುರುಷೋತ್ತಮ್, ರಾಘವೇಂದ್ರ ರಾಯ್ಕರ್ ಇದ್ದರು.
Published on

ಚಿಕ್ಕಮಗಳೂರು: ಯಾವುದೇ ಪ್ರಕರಣದ ಚಾರ್ಜ್‌ಶೀಟ್‌ನೊಂದಿಗೆ ಸಾಕ್ಷಿ ಪುರಾವೆಗಳು ತಾಳೆಯಾಗಬೇಕು ಮತ್ತು ಅದನ್ನು ಸಾಬೀತುಪಡಿಸಬೇಕು. ಆಗ ಮಾತ್ರ ಯಶಸ್ವಿಯಾಗಿ ತನಿಖೆ ಪೂರ್ಣಗೊಳಿಸಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಬಿ.ಪುಷ್ಪಾಂಜಲಿ ತಿಳಿಸಿದರು.

ಎಸ್ಪಿ ಕಚೇರಿಯಲ್ಲಿ ಬುಧವಾರ ತನಿಖಾ ಸಹಾಯಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಬೇರೆ ಕ್ಷೇತ್ರಗಳಂತೆ ಪೊಲೀಸ್ ಇಲಾಖೆಯಲ್ಲೂ ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ತನಿಖೆಗಾಗಿ ಬಳಕೆ ಮಾಡಲಾಗುತ್ತಿರುವ ಪದ್ಧತಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ ರೆಕಾರ್ಡ್‌ನಲ್ಲಿ ಪ್ರಾಥಮಿಕ, ದ್ವಿತೀಯ ಸಾಕ್ಷಿಗಳನ್ನು ಕೇಳುತ್ತಾರೆ. ಡಿಜಿಟಲ್ ಮೂಲಕ ತಯಾರಿಸಿರುವ ವರದಿಯನ್ನು ಇನ್ನೊಬ್ಬರು ಬದಲಾಯಿಸಲು ಸಾಧ್ಯವಿಲ್ಲ. ತನಿಖೆ ಮಾಡುವವರಿಗೆ ಜ್ಞಾನವಿರಬೇಕು. ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಸಲ್ಲಿಸುವ ಚಾರ್ಜ್ ಶೀಟ್, ಸಾಕ್ಷಿಗಳೊಂದಿಗೆ ತಾಳೆಯಾಗಬೇಕು ಎಂದು ಹೇಳಿದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ತನಿಖೆಯಲ್ಲಿ ನಿರಂತರ ಕಲಿಕೆ ಇರುತ್ತದೆ. ತನಿಖೆ ಅಧಿಕಾರಿಗಳು, ಸಹಾಯಕರು ಕಲಿಯುವುದು ಸಾಕಷ್ಟು ಇರುತ್ತದೆ. ಸೂಚಿಸಿರುವಂತೆ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದರೆ ಪರಿಶೀಲನೆ ನಡೆಸಲು ಸುಲಭವಾಗುತ್ತದೆ ಎಂದರು.
ಅನೇಕ ಪ್ರಕರಣಗಳ ವರದಿಗಳನ್ನು ಸಾಕಷ್ಟು ಬಾರಿ ತಿದ್ದಿಸಲಾಗಿದೆ. ಸಾಕ್ಷಿಗಳನ್ನು ಸಕಾಲಕ್ಕೆ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಒಂದು ವೇಳೆ ಇಲಾಖೆಗೆ ವಿರುದ್ಧವಾಗಿ ತೀರ್ಪು ಬಂದರೆ ತನಿಖಾಧಿಕಾರಿ, ಸಹಾಯಕರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಗುಣಮಟ್ಟದ ತನಿಖಾ ವರದಿಯನ್ನು ಸಲ್ಲಿಸಿದಾಗ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ ಎಂದು ತಿಳಿಸಿದರು.
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿವೃತ್ತ ನಿರ್ದೇಶಕ ಎಸ್.ಎನ್.ಹಿರೇಮನಿ, ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಪುರುಷೋತ್ತಮ್, ಕಾನೂನು ಅಧಿಕಾರಿ ರಾಘವೇಂದ್ರ ರಾಯ್ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net