ಶ್ರೇಷ್ಠ ಗುಣಮಟ್ಟದ ಪ್ರತಿಭಾಭಿವ್ಯಕ್ತಿಯಿಂದ ಯಶಸ್ಸು

Bel_Success
Published on

ಬೆಳ್ತಂಗಡಿ: ಶ್ರೇಷ್ಠ ಗುಣಮಟ್ಟದ ಪ್ರತಿಭಾ ಪ್ರದರ್ಶನದ ಕಡೆಗಿನ ಗಮನದಿಂದ ಸ್ಪರ್ಧೆಗಳಲ್ಲಿ ಗೆಲುವಿನ ಹಾದಿ ಸುಗಮವಾಗುತ್ತದೆ ಎಂದು ಖ್ಯಾತ ಗಾಯಕ, ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿ ರಜತ್ ಮಯ್ಯ ಹೇಳಿದರು.

ಶುಕ್ರವಾರ ಎಸ್.ಡಿ.ಎಂ. ಕಾಲೇಜಿನ ಅಂತರ್ ತರಗತಿ ಸ್ಪರ್ಧೆಗಳನ್ನೊಳಗೊಂಡ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ‘ಪ್ರತಿಭಾ ದಿನೋತ್ಸವ’ಕ್ಕೆ ಇಂದ್ರಪ್ರಸ್ಥ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಾಗ ಸ್ಪರ್ಧೆ ಹೇಗಿರುತ್ತದೋ ಎಂದು ಊಹಿಸಿ ಹೆಚ್ಚು ಚಿಂತಿಸಬಾರದು. ಶ್ರೇಷ್ಠ ಗುಣಮಟ್ಟದ ಪ್ರತಿಭಾ ಪ್ರದರ್ಶನದ ಕಡೆಗೇ ಹೆಚ್ಚಿನ ಗಮನವಿರಬೇಕು. ಆ ಬಗೆಯ ಗಮನವು ಸ್ಪರ್ಧೆಯ ಸವಾಲನ್ನು ಎದುರಿಸುವ ಶಕ್ತಿ ನೀಡುತ್ತದೆ. ಗೆಲುವು ಸಾಧ್ಯವಾಗಿಸುವ ಉತ್ಕೃಷ್ಟ ಪ್ರತಿಭಾ ಅಭಿವ್ಯಕ್ತಿಗೆ ಸಹಾಯಕವಾಗುತ್ತದೆ ಎಂದರು.

ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉತ್ಸಾಹದೊಂದಿಗೆ ಪ್ರತಿಭಾನ್ವಿತ ಹೆಜ್ಜೆಗಳನ್ನು ಕ್ರಮಿಸಿ ವ್ಯಕ್ತಿತ್ವದ ಬೆಳವಣಿಗೆಯ ಹಾದಿಯನ್ನು ಕಂಡುಕೊಳ್ಳಬೇಕು ಎಂದರು.

ಪ್ರತಿಭಾ ದಿನೋತ್ಸವದ ತೀರ್ಪುಗಾರರಾದ ರಂಗ ಕಲಾವಿದ ಜಯರಾಮ್ ಮುಂಡಾಜೆ, ನೀನಾಸಂ ಕಲಾವಿದೆ ಸಂಗೀತಾ, ಎಸ್.ಡಿ.ಎಂ ಕಾಲೇಜಿನ ಹಳೇ ವಿದ್ಯಾರ್ಥಿ ಚಂದ್ರಹಾಸ ಬಳಂಜ ಉಪಸ್ಥಿತರಿದ್ದರು.

ಪಠ್ಯೇತರ ಚಟುವಟಿಕೆಗಳ ಸಮಿತಿಯ ಸಂಯೋಜಕ ಡಾ.ಸುಧೀರ್ ಕೆ.ವಿ.ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಡಾ.ನಾಗಣ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net