

ಮೈಸೂರು: ಕೇವಲ ಅಂಕ ಗಳಿಕೆಯಿಂದ ಯಶಸ್ಸು ದೊರೆಯುವುದಿಲ್ಲ. ಕೌಶಲ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಾಲೇಜು ಶಿಕ್ಷಣ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಬಿ.ಚಂದ್ರಶೇಖರ್ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಂು, ಕಾಲೇಜು ಅಭಿವೃದ್ಧಿ ಮಂಡಳಿ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಗುಣಮಟ್ಟ ಹೆಚ್ಚಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅಂಕ ಗಳಿಕೆಗೆ ವಿದ್ಯಾರ್ಥಿಗಳು ಹಂಬಲಿಸುತ್ತಿದ್ದಾರೆ. ಆದರೆ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಖಾಸಗಿಯವರು ಯಾರೂ ಅಂಕಪಟ್ಟಿಯಲ್ಲಿರುವ ಅಂಕಗಳನ್ನು ನೋಡುವುದಿಲ್ಲ. ಅವರು ಕೇವಲ ಕೌಶಲವನ್ನು ನೋಡುತ್ತಿದ್ದಾರೆ ಎಂದರು.
ಆದ್ದರಿಂದ ವಿದ್ಯಾರ್ಥಿಗಳು ಅಂಕದ ಜತೆಗೆ ಕೌಶಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಬೇಕು. ಪ್ರಾಧ್ಯಾಪಕರು ಪಠ್ಯದಲ್ಲಿರುವ ಪಾಠಗಳನ್ನು ಮಾತ್ರ ಮಾಡದೆ ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಅಂಶಗಳನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ. ಒಳ್ಳೆಯ ಹಾಗೂ ಗುಣಮಟ್ಟದ ಶಿಕ್ಷಕರಿಂದ ಮಾತ್ರ ಒಳ್ಳೆಯ ವೈದ್ಯ, ಆಡಳಿತಗಾರ ಹಾಗೂ ರಾಜಕಾರಣಿ ಸೇರಿದಂತೆ ಸಮಾಜಕ್ಕೆ ಉಪಯುಕ್ತರನ್ನು ನೀಡಬಹುದು ಎಂದರು.
ಶಿಕ್ಷಣ ಎಂದರೆ ಪಠ್ಯದಲ್ಲಿರುವುದನ್ನು ಅಭ್ಯಾಸ ಮಾಡುವುದಲ್ಲ. ಮಕ್ಕಳಿಗೆ ಶಿಕ್ಷಣದ ಜತೆ ಜತೆಯಲ್ಲಿ ಅವರಿಗೆ ಮುಂದೆ ಅವಶ್ಯಕತೆ ಇರುವಂತಹ ಕೌಶಲಗಳನ್ನು ಕಲಿಸುವ ಅಗತ್ಯವಿದೆ. ಹೀಗಾಗಿ ಅಧ್ಯಾಪಕರು ಪಠ್ಯಕ್ಕೆ ಸೀಮಿತಗೊಳ್ಳದೆ ವಿದ್ಯಾರ್ಥಿಗಳ ಜೀವನಕ್ಕೆ ಬೇಕಾದ ಅಂಶಗಳನ್ನು ಕಲಿಸಬೇಕು ಎಂದು ಹೇಳಿದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಹಿರಿಯ ಪ್ರಾಧ್ಯಾಪಕರಾದ ಡಾ.ಎನ್. ಎಸ್. ಹರಿನಾರಾಯಣ, ಪ್ರೊ.ಎನ್.ನಾಗರಾಜ, ಐಕ್ಯೂಎಸಿ ನಿರ್ದೇಶಕ ಅಮೃತೇಶ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಕೆ.ಮಂಟೆಲಿಂಗು ಇತರರಿದ್ದರು.