

ಮೈಸೂರು:ಮಾನವನ ಜೀವನವನ್ನು ದಿವ್ಯವನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕಾದರೆ ಸಮಯ ಹಾಗೂ ಸಂಕಲ್ಪವನ್ನು ಉಸಿರಾಗಿಸಿಕೊಳ್ಳಬೇಕು ಎಂದು ಅಹಮದಾಬಾದಿನ ಅಂಬವಾಡಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮನೋಬಲ ತರಬೇತುದಾರೆ ಶಾರದಾ ಜೀ ಹೇಳಿದರು.
ನಗರದ ಹುಣಸೂರು ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯೋಗ ಭವನದಲ್ಲಿ ರಾಜಯೋಗ ಶಿಕ್ಷಕಿಯರು ಹಾಗೂ ಸಂಚಾಲಕರಿಗೆ ಆಯೋಜಿಸಿರುವ ಐದು ದಿನದ ‘ರಾಜಯೋಗ ಧ್ಯಾನ -ಜ್ಞಾನ ಅಖಂಡ ಮೌನ ಹಾಗೂ ದಿವ್ಯ ಜೀವನ’ ಕಾರ್ಯಾಗಾರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಲೋಚನೆಗಳಲ್ಲಿ ದೃಢ ನಿಶ್ಚಯವಿದ್ದಾಗ ಯಾವುದೇ ಅಡೆ-ತಡೆಗಳಿದ್ದರೂ ಉತ್ತಮ ಕೆಲಸ ಮಾಡುವ ಸ್ವಾಭಾವಿಕ ಪ್ರವೃತ್ತಿ ಬರುತ್ತದೆ. ಅಂತಹ ವ್ಯಕ್ತಿಯ ಗುರಿಯ ಸಾಧನೆಯ ಹಾದಿಯಯನ್ನು ಹಾಗೂ ಪ್ರಯತ್ನವನ್ನು ಯಾವುದೇ ಪರಿಸ್ಥಿತಿ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಬಲವಾದ ದೃಢ ನಿಶ್ಚಯವನ್ನು ಹೊಂದಿರುವ ವ್ಯಕ್ತಿಗಳು ಸ್ವಾಭಾವಿಕವಾಗಿಯೇ ಸುಸ್ಥಿರವಾದ ಯಶಸ್ಸನ್ನು ಪಡೆಯುತ್ತಾರೆ ಎಂದು ತಿಳಿಸಿದರು.
ಮೈಸೂರು ಉಪ ವಿಭಾಗದ ಮುಖ್ಯ ಸಂಚಾಲಕಿ ಲಕ್ಷ್ಮೀಜಿ ಮಾತನಾಡಿ, ಮಕ್ಕಳಿಗೆ ವಸ್ತುಗಳನ್ನು ಕೊಡಿಸದಿದ್ದರೆ ಸ್ವಲ್ಪ ಹೊತ್ತು ಅಳುತ್ತವೆ. ಆದರೆ ಒಳ್ಳೆಯ ಸಂಸ್ಕಾರ ಕಲಿಸದಿದ್ದರೆ ಜೀವನ ಪರ್ಯಂತ ಅಳಬೇಕಾಗುತ್ತದೆ ಎನ್ನುವ ಎಚ್ಚರಿಕೆ ಬೇಕಿದೆ. ಹಾಗೆಯೇ ಮನಸ್ಸು ಮತ್ತು ಬುದ್ಧಿಗೂ ಸಹ ಸಕಾರಾತ್ಮಕ ಚಿಂತನೆಗಳನ್ನೇ ಕೊಡುವುದರಿಂದ ಜೀವನ ದಿವ್ಯವಾಗುತ್ತದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾ ಸಂಚಾಲಕಿ ಪ್ರಭಾಮಣಿ ಜೀ, ಮಂಡ್ಯದ ಶಾರದಾಜೀ, ಕೊಡಗಿನ ಗಾಯತ್ರಿಜೀ, ಹಾಸನದ ಮೀನಾಜೀ, ದಾನೇಶ್ವರಿಜೀ ಇತರರು ಇದ್ದರು.