ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ

2kmt3_CA
Published on

ಕುಮಟಾ: ಕಠಿಣ ಪರಿಶ್ರಮ, ಸರಿಯಾದ ಯೋಜನೆ ಮತ್ತು ಆತ್ಮವಿಶ್ವಾಸದಿಂದ ಯಶಸ್ಸನ್ನು ಸಾಧಿಸಬಹುದು. ಸಿಎ ಪರೀಕ್ಷೆ ತೇರ್ಗಡೆ ಕನಸು ಕಂಡಿದ್ದರೆ ಮೊದಲು ಸಿಎ ಫೌಂಡೇಶನ್ ಪರೀಕ್ಷೆಗೆ ಸರಿಯಾದ ತರಬೇತಿ ಪಡೆದುಕೊಳ್ಳಬೇಕು ಎಂದು ಉದ್ಯಮಿ ಜಯಂತ ಭಟ್ಟ ಸಿ.ಎ. ಹೇಳಿದರು.

ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಕಾಲೇಜಿನಲ್ಲಿ ಬುಧವಾರ 2025-26 ನೇ ಶೈಕ್ಷಣಿಕ ಸಾಲಿನ ಜಾಗೃತಿ ಸಿಎ ಫೌಂಡೇಶನ್ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿಎ ಪರೀಕ್ಷೆ ನಿಜಕ್ಕೂ ಒಂದು ಸವಾಲು. ಆದರೆ, ದೃಢ ನಿಶ್ಚಯ, ಸಮರ್ಪಣೆ ಹಾಗೂ ಶಿಸ್ತು ಅಳವಡಿಸಿಕೊಂಡಲ್ಲಿ ಯಶಸ್ವಿ ಲೆಕ್ಕಪರಿಶೋಧಕರಾಗಬಹುದು. ಛಲಗಾತಿ ಅರುಣಿಮಾ ಸಿನ್ಹಾ ಜೀವನ ಎಲ್ಲರಿಗೂ ಆದರ್ಶ. ಪಠ್ಯಕ್ರಮ ಮತ್ತು ಪರೀಕ್ಷೆಯ ಮಾದರಿಯನ್ನು ಅರ್ಥ ಮಾಡಿಕೊಳ್ಳಬೇಕು. ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಬೇಕು. ಉಪನ್ಯಾಸಕರೊಂದಿಗೆ ರ್ಚಚಿಸಿ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿ ವಿಶ್ವಸ್ಥ ಡಿ .ಎನ್. ಭಟ್ಟ ಮಾತನಾಡಿ, ವಿದ್ಯಾರ್ಥಿಗಳು ಸದಾ ಚಲಾವಣೆಯಲ್ಲಿರುವ ನಾಣ್ಯಗಳಾಗಿರಬೇಕು. ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಸಾಮಾನ್ಯವಾದ ಕೆಲಸವನ್ನು ವಿಶಿಷ್ಟವಾಗಿ ಮಾಡಿ ತೋರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಜಿ.ಜಿ.ಹೆಗಡೆ ಮಾತನಾಡಿ, ದೊಡ್ಡ ಕನಸು ಕಾಣಬೇಕು. ಸಮಾಜಕ್ಕೆ ಕೊಡುಗೆ ಕೊಡುವಂತವರಾಗಬೇಕು. ಅಂತರಂಗದಿಂದ ಶುದ್ಧ ಮನಸ್ಕರಾಗಿರಬೇಕು. ಸಿಎ ಫೌಂಡೇಶನ್ ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ ಎಂದರು.

ಉಪಪ್ರಾಚಾರ್ಯು ರಮ್ಯಾ ಸಭಾಹಿತ ಉಪಸ್ಥಿತರಿದ್ದರು. ಪ್ರಾಚಾರ್ಯ ನಾಗರಾಜ ಹೆಗಡೆ ಸ್ವಾಗತಿಸಿದರು. ಉಪನ್ಯಾಸಕಿ ಪೂಜಾ ಭಟ್ಟ ನಿರೂಪಿಸಿದರು. ಉಪನ್ಯಾಸಕ ಗೌರೀಶ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net