ಪ್ರಾಮಾಣಿಕ ವೃತ್ತಿಯಿಂದ ಯಶಸ್ಸು, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ್ ಬಿದರಿ ಅಭಿಮತ

06 Nela Ph 1 News Shop Udgatane
Published on

ನೆಲಮಂಗಲ: ಸಾಮಾಜಿಕ ಕಳಕಳಿ, ಪರಿಶ್ರಮದ ಜತೆಗೆ ಪ್ರಾಮಾಣಿಕತೆ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಉದ್ಯಮದಲ್ಲಿ ಯಶಸ್ಸು ಗಳಿಸಬಹುದು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ್ ಬಿದರಿ ಅಭಿಪ್ರಾಯಪಟ್ಟರು.

ನಗರದ ಟಿ.ಬಿ.ಬಸ್ ನಿಲ್ದಾಣದ ಮುಖ್ಯರಸ್ತೆಯಲ್ಲಿ ಭಾನುವಾರ ನಿತ್ಯಾ ಗಾರ್ಮೆಂಟ್ಸ್ ನೂತನವಾಗಿ ಆರಂಭಿಸುತ್ತಿರುವ ಬಟ್ಟೆ ಮಳಿಗೆ ಉದ್ಘಾಟಿಸಿ ಮಾತನಾಡಿದರು.

ವಿದೇಶಿ ಕಂಪನಿಗಳು ಅಧಿಕ ಲಾಭ ಪಡೆಯುತ್ತಿವೆ. ಆದರೆ ಪ್ರತಿಷ್ಠಿತ ಬ್ರ್ಯಾಂಡ್ ಕಂಪನಿಗಳಂತೆ ಗುಣಮಟ್ಟದ ಸಿದ್ಧ ಉಡುಪು ತಯಾರಿಸುವ ಕಾರ್ಖಾನೆಯನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭ ಮಾಡಿ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿರುವುದು, ಎಲ್ಲ ವರ್ಗದ ಜನರಿಗೂ ಕೈಗೆಟಕುವ ದರದಲ್ಲಿ ಬಟ್ಟೆ ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ರಿಯಲ್ ಎಸ್ಟೇಟ್ ಡೆವಲಪರ್ಸ್‌, ಗುತ್ತಿಗೆದಾರರು ಮತ್ತು ಶ್ರೀಮಂತ ಕುಟುಂಬಕ್ಕೆ ಸೇರಿದ ಕೆಲ ಮಕ್ಕಳು, ಸಿನಿಮಾ ತಾರೆಯರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಬಡಕುಟುಂಬದ ಮಕ್ಕಳು ಆ ರೀತಿ ಮಾಡುವುದಿಲ್ಲ. ನ್ಯಾಯ ಏಲ್ಲಿದೆ?, ಅದನ್ನು ಕಾಪಾಡುವುದು, ಪರಿಶ್ರಮ ಪ್ರಾಮಾಣಿಕತೆಯಿಂದ ದುಡಿದ ವ್ಯಕ್ತಿಗಳಿಗೆ ಗೌರವ ಮತ್ತು ರಕ್ಷಣೆ ನೀಡಬೇಕು ಎಂದರು.

ತಪ್ಪು ಮಾಡಿದವರಿಗೆ, ಸುಲಿಗೆ, ದರೋಡೆ, ಲಂಚ ತೆಗೆದುಕೊಳ್ಳುವ ವ್ಯಕ್ತಿಗಳ ವಿರುದಗಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ಮನವಿ: ವರ್ಷವಿಡಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳಿಗೆ ಪ್ರತಿವರ್ಷ ವರ್ಗಾವಣೆ ಮಾಡಬೇಕೆಂಬ ನಿಯಮ ಜಾರಿಗೊಳಿಸಿರುವುದು ಬೇಸರದ ಸಂಗತಿ. ಕನಿಷ್ಠ 2 ವರ್ಷ ಅಧಿಕಾರ ಮಾಡುವ ಅವಕಾಶ ಕಲ್ಪಿಸಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ತವರು ಜಿಲ್ಲೆಯಲ್ಲೇ ಕುಟುಂಬದೊಂದಿಗೆ ಇದ್ದುಕೊಂಡು ಕರ್ತವ್ಯ ನಿರ್ವಹಿಸುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಬಿದರಿ ಮನವಿ ಮಾಡಿದರು.

ನೂತನ ಬಟ್ಟೆ ಮಳಿಗೆ ಪ್ರಾರಂಭ ಮತ್ತು ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ ಎಂದು ನಿತ್ಯಾ ಗಾರ್ಮೆಂಟ್ಸ್ ಮಾಲೀಕ ಕುಮಾರ್ ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ಸಚ್ಚಿದಾನಂದ, ವ್ಯವಸ್ಥಾಪಕ ಮುರಳಿ, ರವಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net