ಕೈ ಹಿಡಿದ ಮೊಬೈಲ್ ತರಕಾರಿ ವ್ಯಾಪಾರ

Mobile business sharath
Published on

ಪ್ರಕಾಶ್ ಮಂಜೇಶ್ವರ, ಮಂಗಳೂರು

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡ್ಮಾಣ್ ಗ್ರಾಮದ ಶರತ್ ಕುಮಾರ್ ಕತಾರ್‌ನಲ್ಲಿ ಇಲೆಕ್ಟ್ರೀಶಿಯನ್ ಆಗಿದ್ದವರು.

ತಂಗಿ ಮದುವೆ ಬಳಿಕ ಊರಲ್ಲೇ ಅಪ್ಪ, ಅಮ್ಮನ ಜತೆ ನೆಲೆಸಿ, ಸ್ವಂತ ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳುವ ಕನಸು ನನಸಾಗಲು ಲಾಕ್‌ಡೌನ್ ಕಾರಣವಾಯಿತು!

2019ರ ಡಿಸೆಂಬರ್‌ನಲ್ಲಿ ಶರತ್ ವಿದೇಶದಿಂದ ವಾಪಸಾದರು. ಮೊಬೈಲ್ ಕ್ಯಾಂಟೀನ್ ತೆರೆಯುವ ಯೋಜನೆ ಹಾಕಿಕೊಂಡು, 60 ಸಾವಿರ ರೂ.ವೆಚ್ಚದ ಓಮ್ನಿಯನ್ನೂ ಖರೀದಿಸಿದ್ದರು. ಅಷ್ಟರಲ್ಲೇ ಲಾಕ್‌ಡೌನ್ ಘೋಷಣೆಯಾಯಿತು. ಕೈಯಲ್ಲಿದ್ದ ದುಡ್ಡು ಖಾಲಿ. ಊರಲ್ಲಿ ಹೆಚ್ಚಿನ ಅಂಗಡಿಗಳು ಂದರ ಮೇಲೊಂದರಂತೆ ಮುಚ್ಚತೊಡಗಿದವು. ಮೊಬೈಲ್ ಕ್ಯಾಂಟೀನ್‌ಗೆ ಅವಕಾಶವೂ ಇರಲಿಲ್ಲ. ಆಗ ಅನೇಕ ಮಂದಿ ತರಕಾರಿ ಖರೀದಿಸಲು ಕಷ್ಟಪಡುತ್ತಿದ್ದರು. ಶರತ್‌ಗೆ ಅಲ್ಲೊಂದು ಹೊಸ ಯೋಚನೆ ಹೊಳೆಯಿತು. ಗ್ರಾಹಕರ ಬಳಿಗೆ ತೆರಳುವ ತರಕಾರಿ ವ್ಯಾಪಾರ ಶುರುವಾಗಿದ್ದು ಹೀಗೆ.

ದಿನಕ್ಕೊಂದು ಮಾರ್ಗ: ಶರತ್ ತರಕಾರಿ ಮಾರಾಟಕ್ಕೆ ಹೊಸ ಹೊಸ ಜಾಗ ಹುಡುಕುತ್ತಾರೆ. ವ್ಯಾಪಾರದಲ್ಲಿ ಸ್ನೇಹಿತರು ಕೈ ಜೋಡಿಸಿದ್ದಾರೆ. ಅವರ ವ್ಯವಹಾರ ಚೆನ್ನಾಗಿ ನಡೆಯುತ್ತಿರುವ ಕಾರಣ, ವೃತ್ತಿ ಬದಲಾವಣೆಯ ವಿಷಾದವಿಲ್ಲ. ಕರೊನಾ ಎರಡನೇ ಅಲೆಯಲ್ಲಿಯೂ ವ್ಯಾಪಾರಕ್ಕೆ ಅಡ್ಡಿ ಆಗಿಲ್ಲ. ಊರಲ್ಲೇ ಉದ್ಯೋಗ ಮತ್ತು ಸ್ವಂತ ಬದುಕು ಕಟ್ಟಿಕೊಂಡ ಶರತ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಹಾಸನ, ಚಿಕ್ಕಮಗಳೂರಿನಿಂದ ಖರೀದಿ: ಮಂಗಳೂರು ಮಾರುಕಟ್ಟೆಯಷ್ಟೇ ಅಲ್ಲ, ಶರತ್ ಹಾಸನ, ಚಿಕ್ಕಮಗಳೂರಿನಿಂದ ದೊಡ್ಡ ಪ್ರಮಾಣದಲ್ಲಿ ತರಕಾರಿ ಖರೀದಿಸುತ್ತಾರೆ. ತಂಗಿ ಮದುವೆಗಾಗಿ ಮಾಡಿದ್ದ ಸಾಲವೂ ಮುಗಿದಿದೆ. ಹೊಸ ಉದ್ಯೋಗದಲ್ಲಿ ಕೊಂಚ ಸೇವಿಂಗ್ಸ್ ಸಾಧ್ಯವಾಗಿದೆ ಎನ್ನುತ್ತಾರೆ ಶರತ್. ಹಾಗೆಂದು, ಈವರೆಗೆ ಮಾಡಿಕೊಂಡಿದ್ದ ಇಲೆಕ್ಟ್ರೀಶಯನ್ ವೃತ್ತಿಯನ್ನು ಅವರು ಮರೆತಿಲ್ಲ. ಮಧ್ಯಾಹ್ನ ತರಕಾರಿ ವ್ಯಾಪಾರ ಮುಗಿದ ನಂತರ ಹಳೇ ವೃತ್ತಿಯನ್ನೂ ಮಾಡುತ್ತಾರೆ.

ವಿದೇಶದಲ್ಲಿದ್ದ ಉದ್ಯೋಗ ಬಿಟ್ಟು ಊರಿಗೆ ಬಂದುದರಲ್ಲಿ ಕೊಂಚವೂ ಬೇಸರವಿಲ್ಲ. ಇದು ಅನುಕೂಲವೇ ಆಗಿದೆ. ಮೊಬೈಲ್ ತರಕಾರಿ ವ್ಯಾಪಾರದಿಂದ ಉತ್ತಮ ಆದಾಯವಿದೆ. ಪಾಲಕರೊಂದಿಗಿರುವ ಆಸೆಯೂ ಈಡೇರಿದೆ. - ಶರತ್ ಕುಮಾರ್ ತರಕಾರಿ ವ್ಯಾಪಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net