ನಿನ್ನಿಕಲ್‌ನಲ್ಲಿ ಸಬ್‌ಸ್ಟೇಷನ್ ಕಾಮಗಾರಿ ಶೀಘ್ರ

Bel_Ninnikal
Published on

ಬೆಳ್ತಂಗಡಿ: ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ವತಿಯಿಂದ ಬೆಳ್ತಂಗಡಿ ಮತ್ತು ಉಜಿರೆ ಉಪವಿಭಾಗ ಕಚೇರಿಯ ವಿದ್ಯುತ್ ಬಳಕೆದಾರರ ಜನಸಂಪರ್ಕ ಸಭೆ ಬೆಳ್ತಂಗಡಿ ಉಪವಿಭಾಗ ಕಚೇರಿಯಲ್ಲಿ ಶನಿವಾರ ನಡೆಯಿತು.

ಮೆಸ್ಕಾಂ ಮಂಗಳೂರು ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಲೋಡ್ ಸಮಸ್ಯೆಗೆ ಎಲ್ಲ ಉಪ ವಿಭಾಗದಲ್ಲಿ ಹೆಚ್ಚುವರಿ ವಿದ್ಯುತ್ ಒದಗಿಸಿ ಅಪ್‌ಗ್ರೇಡ್ ಮಾಡಲಾಗಿದೆ. ನಿನ್ನಿಕಲ್‌ನಲ್ಲಿ ಸಬ್‌ಸ್ಟೇಷನ್ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಆಗಲಿದೆ. ಬೆಳಾಲಿನಲ್ಲಿ ಸಬ್‌ಸ್ಟೇಷನ್ ಆರಂಭಕ್ಕೆ ನಿಗದಿಪಡಿಸಿದ ಜಾಗದಲ್ಲಿ ಅರಣ್ಯ ಇಲಾಖೆಯ ಜಾಗ ಎಂದು ಆಕ್ಷೇಪ ಇದ್ದು ಬೇರೆ ಜಾಗ ಇದ್ದಲ್ಲಿ ತಹಸೀಲ್ದಾರ್‌ರನ್ನು ಸಂಪರ್ಕ ಮಾಡಿ ಜಾಗ ಮಂಜೂರಾದರೆ ಅಲ್ಲಿ 110 ಕೆವಿ ಸಬ್‌ಸ್ಟೇಷನ್ ಪ್ರಾರಂಭ ಮಾಡಲಾಗುವುದು. ಸರ್ಕಾರದ ಯೋಜನೆ ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿ ಸೌರ ಶಕ್ತಿಯಿಂದ ವಿದ್ಯುತ್ ಉಪಯೋಗ ಮಾಡಿದರೆ ಸರ್ಕಾರದಿಂದ ಗರಿಷ್ಠ 78 ಸಾವಿರ ರೂ. ಸಬ್ಸಿಡಿ ಪಡೆಯಬಹುದು. ಹೆಚ್ಚುವರಿ ವಿದ್ಯುತ್ ಮೆಸ್ಕಾಂ ಖರೀದಿ ಮಾಡಿತ್ತದೆ ಎಂದರು.

ಮೆಸ್ಕಾಂ ಬಳಕೆದಾರರಿಂದ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಲಾಯಿತು. ಬಂಟ್ವಾಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವೆಂಕಟೇಶ್ ಡಿ.ಎಚ್.ಉಜಿರೆ ಉಪ ವಿಭಾಗದ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ಪ್ರವೀಣ್ ಬಿ.ಎನ್., ಬಂಟ್ವಾಳ ವಿಭಾಗದ ಲೆಕ್ಕಾಧಿಕಾರಿ ಚಂದ್ರಶೇಖರ್, ತಾಲೂಕಿನ ವಿವಿಧ ಉಪ ವಿಭಾಗದ ಸಹಾಯಕ ಇಂಜಿನಿಯರ್, ಸಿಬ್ಬಂದಿ, ವಿದ್ಯುತ್ ಬಳಕೆದಾರರು ಭಾಗವಹಿಸಿದ್ದರು. ವಿದ್ಯುತ್ ಗ್ರಾಹಕರು ಸಮಸ್ಯೆಯ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ನಂದಿನಿ ಎಂ.ಸ್ವಾಗತಿಸಿ ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜೆನಿಯರ್ ಕ್ಲೇಮೆಂಟ್ ಬೆಂಜಮಿನ್ ಬ್ರಾಗ್ಸ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net