ನೇಂದ್ರ ಬಾಳೆ ಬೆಲೆ ಗಣನೀಯ ಕುಸಿತ

nendra
Published on

ಕಾಸರಗೋಡು/ಮಂಗಳೂರು: ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಒಂದೊಮ್ಮೆ ಅಪಾರ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದ ನೇಂದ್ರ ಬಾಳೆ ಕೃಷಿಕರಿಗೆ ಈಗ ಬೆಲೆ ಕುಸಿತದ ಸಂಕಷ್ಟ ಎದುರಾಗಿದೆ.

ಕಾಸರಗೋಡಿನಲ್ಲಿ ತಿಂಗಳ ಹಿಂದೆ ಕಿಲೋ ಒಂದಕ್ಕೆ 50ರಿಂದ 60 ರೂ. ಹೊಂದಿದ್ದ ನೇಂದ್ರ ಬಾಳೆಹಣ್ಣಿನ ಬೆಲೆ ಈಗ ದಿಢೀರನೆ ಕುಸಿದು ಕಿಲೋಗೆ 20 ರೂ. ತಲುಪಿದೆ. ನೇಂದ್ರ ಕಾಯಿ ಮಾರಾಟ ಸಂದರ್ಭ ಇದರ ಅರ್ಧ ಬೆಲೆ ಸಿಗುತ್ತಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ 100 ರೂ.ಗೆ ಮೂರರಿಂದ ಐದು ಕಿಲೋ ಬಾಳೆ ಹಣ್ಣು ಲಭ್ಯವಾಗುತ್ತಿದೆ.

ನೇಂದ್ರ ಬಾಳೆಹಣ್ಣಿನ ಬೆಲೆ ಕುಸಿತ ಗ್ರಾಹಕರಿಗೆ ವರದಾನವಾಗಿದ್ದರೆ, ಕೃಷಿಕರು ಸಂಕಷ್ಟ ಎದುರಿಸುವಂತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಕೃಷಿ ನಡೆಸುತ್ತಿರುವ ಕೃಷಿಕರಿಗೆ ಬೆಲೆ ಕುಸಿತ ಭಾರಿ ಹೊಡೆತ ನೀಡಿದೆ. ತಮಿಳುನಾಡು ಸಹಿತ ಇತರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೇಂದ್ರ ಬಾಳೆ ಆಮದಾಗುತ್ತಿರುವುದರಿಂದ ಇಲ್ಲಿನ ಬೆಳೆಯನ್ನು ಕೇಳುವವರಿಲ್ಲದ ಸ್ಥಿತಿಯಿದೆ.

‘ಗೊಬ್ಬರ ಹಾಕಿ, ಔಷಧ ಸಿಂಪಡಿಸಿ, ನೀರುಣಿಸಿ ಬೆಳೆಸಿ ಕಟಾವಿಗೆ ಸಿದ್ಧಗೊಂಡಾಗ ಕಡಿಮೆ ಬೆಲೆಗೆ ಗೊನೆ ಮಾರಾಟ ಮಾಡಬೇಕಾಗುತ್ತದೆ. ಉತ್ತಮ ಬೇಡಿಕೆ ಸಂದರ್ಭ ಬಾಳೆಗೊನೆ ಕಿಲೋಗೆ 30ರಿಂದ 35 ರೂ.ವರೆಗೂ ಸಿಗುತ್ತಿತ್ತು. ಈಗ 10 ರೂ.ಗೂ ಕೇಳುವವರಿಲ್ಲದ ಸ್ಥಿತಿಯಿದೆ’ ಎಂದು ಬೋವಿಕ್ಕಾನ ಕೃಷಿಕ ಪ್ರಿಯರಾಜ್ ಪ್ರತಿಕ್ರಿಯಿಸಿದ್ದಾರೆ.

ಕಡಿಮೆಯಾದ ಬೆಳೆ: ಇತ್ತೀಚಿನ ವರ್ಷಗಳಲ್ಲಿ ನೇಂದ್ರ ಬಾಳೆಗೆ ಬೇಡಿಕೆ ಕಡಿಮೆಯಾದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆ ಕಡಿಮೆಯಾಗಿದೆ. ಅಂತರ ಬೆಳೆ ತೆಗೆಯುವವರಿದ್ದಾರೆ. ಹಿಂದಿನಂತೆ ನೇಂದ್ರ ಬಾಳೆಯನ್ನೇ ಎಕರೆಗಳಷ್ಟು ಜಾಗದಲ್ಲಿ ಬೆಳೆಯುವವರು ಕಾಣಸಿಗುವುದಿಲ್ಲ.

ಗ್ರಾಮಾಂತರ ಪ್ರದೇಶಗಳಲ್ಲಿ ಬೆಳೆಸುವವರು ಕೂಡ ಅಡಕೆ, ತೆಂಗು ಮುಂತಾದ ಮರಗಳ ನಡುವೆ ಅಂತರ ಬೆಳೆ ತೆಗೆಯುತ್ತಿದ್ದಾರೆ ಎನ್ನುತ್ತಾರೆ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಭಾಗದ ಅಧಿಕಾರಿ ರಶ್ಮಿ.

ಮಂಗಳೂರಿನಲ್ಲಿ 30ರಿಂದ 40 ರೂ.ಗೆ ಪ್ರತಿ ಕೆ.ಜಿ. ನೇಂದ್ರ ಬಾಳೆಹಣ್ಣು ಸಿಗುತ್ತಿದೆ. ಕೆಲವು ಕಡೆ ರಸ್ತೆ ಬದಿ ವಾಹನಗಳಲ್ಲಿ ಇದಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net