

ವೀರಯ್ಯ ಎಂ. ವಸ್ತ್ರದ ಹೊಳೆಆಲೂರ
ರೋಣ ತಾಲೂಕಿನ ಪ್ರಧಾನ ಮಾರುಕಟ್ಟೆ ಕೇಂದ್ರವಾಗಿ ವೈಭವದ ದಿನಗಳನ್ನು ಕಂಡಿದ್ದ ಹೊಳೆಆಲೂರು ಎಪಿಎಂಸಿ ಈಗ ಅಕ್ಷರಶಃ ಭಣಗುಡುತ್ತಿದೆ.
ಈ ಭಾಗದಲ್ಲಿ ಮಳೆಯ ಕೊರತೆ ಹಾಗೂ ಸರ್ಕಾರದ ಕೃಷಿ ನೀತಿಗಳಿಂದಾಗಿ ವಹಿವಾಟು ಕುಸಿದಿದೆ. ಸಮಿತಿಗೆ ಎರಡು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಮಾರುಕಟ್ಟೆ ಸಮಿತಿಗೆ ಆಡಳಿತವಿಲ್ಲದೆ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ.
ಆರು ದಶಕಗಳ ಇತಿಹಾಸದ ಹೊಂದಿದ ಹೊಳೆಆಲೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 1967ರಲ್ಲಿ ಅಂದಿನ ಶಾಸಕ ಅಂದಾನಪ್ಪ ದೊಡ್ಡಮೇಟಿ ಅವರ ಪ್ರಯತ್ನದ ಫಲವಾಗಿ ಸಹಕಾರ ಮಂತ್ರಿ ಕೆ. ಪುಟ್ಟಸ್ವಾಮಿ ಅವರಿಂದ ಎಪಿಎಂಸಿ ಉದ್ಘಾಟನೆಯಾಗಿತ್ತು. ಈ ಅವಧಿಯಲ್ಲಿ 23 ಅಧ್ಯಕ್ಷರು ಅಧಿಕಾರ ನಡೆಸಿ ಹಲವು ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಪರಿಣಾಮ ತಾಲೂಕಿನ ರೈತರಿಗೆ ಮಾತ್ರವಲ್ಲ ಕುಷ್ಟಗಿ, ಬಾದಾಮಿ, ಹುನಗುಂದ ತಾಲೂಕಿನ ರೈತರ ಅಚ್ಚುಮೆಚ್ಚಿನ ಮಾರುಕಟ್ಟೆಯಾಗಿತ್ತು. ಹೆಸರು, ಶೇಂಗಾ, ಸೂರ್ಯಕಾಂತಿ, ಗೋವಿನಜೋಳ, ಜೋಳದ ವಹಿವಾಟು ಹಗಲುರಾತ್ರಿಯೂ ನಡೆಯುತ್ತಿತ್ತು.
ನಂತರದ ದಿನಗಳಲ್ಲಿ ರೋಣ ಹಾಗೂ ಗಜೇಂದ್ರಗಡದಲ್ಲಿ ಉಪಮಾರುಕಟ್ಟೆಗಳು ಹುಟ್ಟಿಕೊಂಡರೂ ಹೊಳೆಆಲೂರು ಮಾರುಕಟ್ಟೆ ತನ್ನ ವೈಭವ ಕಳೆದುಕೊಂಡಿರಲಿಲ್ಲ. ವ್ಯಾಪಾರಸ್ಥರು ತಮಗೆ ಬರುವ ಆದಾಯದಲ್ಲಿ ಸ್ವಲ್ಪ ಪ್ರಮಾಣವನ್ನು ಈ ಭಾಗದ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ, ದಾನ ನೀಡಿದ್ದರಿಂದ ಪಟ್ಟಣದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತಿವೆ. ಆದರೆ, ಎರಡು ವರ್ಷದ ಹಿಂದೆ ಸರ್ಕಾರ ಜಾರಿಗೊಳಿಸಿದ ನೂತನ ಕೃಷಿ ಕಾಯ್ದೆ ನೀತಿಯಿಂದ ಈ ಮಾರುಕಟ್ಟೆಗೆ ಬಲವಾದ ಪೆಟ್ಟು ನೀಡಿತು.
ನೂತನ ನೀತಿಯಿಂದ ಆದಾಯ ಕುಸಿತವಾಗಿದೆ. ಹಿಂದೆ 1 ಲಕ್ಷ ರೂ. ವ್ಯವಹಾರ ನಡೆದರೆ 16 ಸಾವಿರ ರೂ.ಆದಾಯ ಸಮಿತಿಗೆ ಬರುತ್ತಿತ್ತು. ಈಗ ಕೇವಲ 6 ಸಾವಿರ ರೂ. ಬರುವಂತಾಗಿದೆ. ಹಿಂದೆ ವಹಿವಾಟು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಆಗುತ್ತಿತ್ತು. ಬೇರೆ ಕಡೆ ಖರೀದಿದಾರರು ವ್ಯವಹಾರ ನಡೆಸಿದರೆ ದಂಡ ಹಾಕಲಾಗುತ್ತಿತ್ತು. ಈಗ ಎಲ್ಲ ಕಡೆ ವಹಿವಾಟಿಗೆ ಅನುಮತಿ ನೀಡಿರುವುದರಿಂದ ಮಾರುಕಟ್ಟೆ ಪ್ರಾಂಗಣಕ್ಕೆ ಕೃಷಿ ಸರಕು ಬರುವುದು ಕಡಿಮೆಯಾಗಿದೆ.
ಸಮಿತಿಗೆ ಎರಡು ವರ್ಷದಿಂದ ಲಕ್ಷಾಂತರ ರೂ. ಆದಾಯ ಕಡಿಮೆಯಾಗಿದೆ. ಹಿಂದೆ ಸಮಿತಿಯ ಕಾರ್ಯಾಲಯದಲ್ಲಿ 18 ರಿಂದ 21 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರೆ, ಈಗ ಹೊಳೆಆಲೂರ ಪ್ರಧಾನ ಮಾರುಕಟ್ಟೆ ಕೇಂದ್ರ, ರೋಣ ಹಾಗೂ ಗಜೇಂದ್ರಗಡ ಉಪ ಮಾರುಕಟ್ಟೆ ಸೇರಿ ಕೇವಲ 6 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.ಎರಡು ವರ್ಷಗಳಿಂದ ಸಮಿತಿಗೆ ಚುನಾವಣೆ ಜರುಗಿಲ್ಲ. ರೈತರ ಹಾಗೂ ವ್ಯಾಪಾರಸ್ಥರ ಪ್ರತಿನಿಧಿಗಳು ಇಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ‘ವಿಜಯವಾಣಿ‘ಯು ಎಪಿಎಂಸಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಮೂರು ಅವಧಿಗೆ ಹೊಳೆಆಲೂರ ಎಪಿಎಂಸಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ನನ್ನ ಅವಧಿಯಲ್ಲಿ ಸಿಸಿ ರಸ್ತೆ, ಗಟಾರು, ಉಗ್ರಾಣ ನಿಗಮದ ಕಟ್ಟಡಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಹೊಳೆಆಲೂರ ವ್ಯಾಪಾರದ ಕೇಂದ್ರವಾಗಿತ್ತು. ಈಗ ಸರ್ಕಾರದ ನೀತಿ ಹಾಗೂ ಮಾರುಕಟ್ಟೆಗೆ ಚುನಾವಣೆ ನಡೆಯದಿರುವುದರಿಂದ ಸಂಪೂರ್ಣ ಕಳೆಗುಂದಿದೆ. ಮಾರುಕಟ್ಟೆಯ ಸ್ಥಿತಿ ನೋಡಿದರೆ ಮನಸಿಗೆ ನೋವು ಆಗುತ್ತದೆ.-ಪರಶುರಾಮ ಅಳಗವಾಡಿ, ಎಪಿಎಂಸಿ ಮಾಜಿ ಅಧ್ಯಕ್ಷ