ಸಹಾಯಧನದಿಂದ ವಂಚಿತರಾಗದಂತೆ ಬೆಳೆಹಾನಿ ಸಮೀಕ್ಷೆ ನಡೆಸಿ - ರಮೇಶ ಜಾರಕಿಹೊಳಿ

Ramesh_web
Published on

ಬೆಳಗಾವಿ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ತರಕಾರಿ, ಹೂ ಬೆಳೆಗಾರರು ಸರ್ಕಾರದ ಸಹಾಯಧನದಿಂದ ವಂಚಿತರಾಗದಂತೆ ಹಾಗೂ ಸಮರ್ಪಕವಾಗಿ ಬೆಳೆಹಾನಿ ಸಮೀಕ್ಷೆ ನಡೆಸುವಂತೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಾಕೀತು ಮಾಡಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರವಾಹ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಸೌಲಭ್ಯಗಳಿಂದ ಬೆಳೆಗಾರರು ವಂಚಿತರಾಗದಂತೆ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಬಾರದು. ರೈತರಿಗೆ ಸಿಗಬೇಕಿರುವ ಪರಿಹಾರ ಮತ್ತು ಬೆಳೆವಿಮೆ ಸಮರ್ಪಕವಾಗಿ ಒದಗಿಸಬೇಕು. ರೈತರಿಗೆ ಕಳಪೆ ಬಿತ್ತನೆ ಬೀಜ ನೀಡಿರುವ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

ಅಧಿಕಾರಿಗಳ ನಿರ್ಲಕ್ಷೃ: ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ತರಕಾರಿ ಮತ್ತು ಹೂ ಬೆಳೆಗಾರರ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಸಮೀಕ್ಷೆ ನಡೆಸದ ಅಧಿಕಾರಿಗಳು ಇದೀಗ ಸಮೀಕ್ಷೆಗಾಗಿ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ, ಇಲಾಖೆ ಅಧಿಕಾರಿಗಳಿದ್ದರು.

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣದಿಂದ ನದಿ ತೀರದ ಗ್ರಾಮಗಳಲ್ಲಿ ನಿಗಾ ವಹಿಸಬೇಕು. ತುರ್ತು ಪರಿಸ್ಥಿತಿ ನಿರ್ವಹಿಸಲು ಅಗತ್ಯವಿರುವ ಬೋಟ್ ಮತ್ತಿತರ ಸಲಕರಣೆ ಸಿದ್ಧವಾಗಿಟ್ಟುಕೊಳ್ಳಿ.|ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net