ಮನೆಗೆ ನೀಡುತ್ತಿದ್ದ ಸಬ್ಸಿಡಿ ಹಣ ಹೆಚ್ಚಳ: ಸಾಮಾನ್ಯ ವರ್ಗಕ್ಕೆ 3 ಲಕ್ಷ, ಎಸ್ಸಿಗೆ 3.50 ಲಕ್ಷ ರೂ.ನಿಗದಿ

zameer
Published on

ಬೆಂಗಳೂರು:ವಸತಿ ಯೋಜನೆಗಳಡಿ ಮನೆಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಹಣವನ್ನು ಹೆಚ್ಚಿಸಲು ಈಗಾಗಲೇ ತೀರ್ಮಾನವಾಗಿದೆ. ಈ ಬಗ್ಗೆ ಬಜೆಟ್​ನಲ್ಲಿ ನಮ್ಮ ಸರ್ಕಾರ ಘೋಷಿಸಲಿದೆ ಎಂದು ಸಚಿವ ಜಮೀರ್​ ಅಹ್ಮದ್​ ಬುಧವಾರ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಅನಿಲ್​ಕುಮಾರ್​ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವರು. ಸಾಮಾನ್ಯ ವರ್ಗದ ಲಾನುಭವಿಗಳಿಗೆ ನೀಡಲಾಗುತ್ತಿದ್ದ 1.20 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ, ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ದ ಫಲಾನುಭವಿಗೆ ನೀಡಲಾಗುತ್ತಿದ್ದ 1.60 ಲಕ್ಷ ರೂ.ನಿಂದ 3.5 ಲಕ್ಷ ರೂ.ಗೆ ಸಬ್ಸಿಡಿ ಮೊತ್ತವನ್ನು ಏರಿಸಲಾಗುವುದು. ಇದರಿಂದಾಗಿ ಬಡವರಿಗೆ ಅನುಕೂಲವಾಗಲಿದೆ. ಪೂರ್ತಿಯಾಗದ 9 ಲಕ್ಷ ಮನೆಗಳನ್ನು ಅದಷ್ಟೂ ಬೇಗ ಪೂರ್ಣಗೊಳಿಸುವಂತೆ ಕಳೆದ ವರ್ಷ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ವರ್ಷ ಸಬ್ಸಿಡಿ ಮೊತ್ತ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಕಟ್ಟಡಗಳ ಸಾಮಗ್ರಿ ಬೆಲೆಯೂ ಜಾಸ್ತಿಯಾಗಿದ್ದು, ಮನೆ ಕಟ್ಟಲು ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಣ ಸಾಕಾಗುತ್ತಿಲ್ಲ.ಹಾಗಾಗಿ, ಸಬ್ಸಿಡಿ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸುವಂತೆ ಸಚಿವರಿಗೆ ಕಾಂಗ್ರೆಸ್​ನ ಅನಿಲ್​ಕುಮಾರ್​ ಮನವಿ ಮಾಡಿದ್ದರು.

8 ಲಕ್ಷ ಮನೆಗಳು ಪ್ರಾರಂಭವಾಗಿಲ್ಲ: ಪ್ರಧಾನ ಮಂತಿತ್ರಿ ಆವಾಸ್​ ಯೋಜನೆ(ನಗರ)ಯಡಿ ರಾಜ್ಯಾದ್ಯಂತ ಒಟ್ಟು 4,54,692 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಯೋಜನೆಯಡಿ 4,54,692 ಮನೆಗಳ ಪೈಕಿ 2,55,711 ಮನೆಗಳು ಪೂರ್ಣವಾಗಿದೆ. 1,17,441 ಮನೆಗಳು ಪ್ರಗತಿಯಲ್ಲಿದ್ದು, 81,540 ಮನೆಗಳು ಪ್ರಾರಂಭವಾಗಬೇಕಿದೆ. ಗ್ರಾಮೀಣ ಭಾಗದಲ್ಲಿ 9,32,864 ಮನೆಗಳ ಪೈಕಿ 3,46,878 ಮನೆಗಳಿಗೆ ಅನಮೋದನೆ ನೀಡಲಾಗಿದೆ. ಇದರಲ್ಲಿ 1,55,567 ಮನೆಗಳು ಪೂರ್ಣವಾಗಿವೆ. 52,097 ಪ್ರಗತಿಯಲ್ಲಿವೆ. 7,25,200 ಮನೆಗಳು ಪ್ರಾರಂಭವಾಗಬೇಕಿದೆ ಎಂದು ಸಚಿವರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net