ಹೂ ಬೆಳೆಗಾರರಿಗೆ ಸಹಾಯಧನ

14mdkm1
Published on

ಮಡಿಕೇರಿ: ವಿವಿಧ ರೀತಿ ಹೂ ಬೆಳೆದಿರುವ ಬೆಳೆಗಾರರು ಮೇ 26ರೊಳಗೆ ತಮ್ಮ ವ್ಯಾಪ್ತಿಯ ನಾಡ ಕಚೇರಿ ಅಥವಾ ತಾಲೂಕು ತೋಟಗಾರಿಕಾ ಇಲಾಖೆ ಕಚೇರಿಗೆ ‘ಹೂ ಬೆಳೆ ಪರಿಹಾರ’ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದರು.

ಕೋವಿಡ್-19 ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ತುತ್ತಾಗಿರುವ ಹೂಬೆಳೆಗಾರರಿಂದ ಅರ್ಜಿ ಆಹ್ವಾನಿಸುವ ಸಂಬಂಧ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.

ಹೂ ಬೆಳೆಗಾರರಿಗೆ 1 ಎಕರೆಗೆ 10 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. 1 ಹೆಕ್ಟೇರ್‌ಗೆ ಗರಿಷ್ಠ 25 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಈಗಾಗಲೇ ಹೂ ಬೆಳೆ ಸಮೀಕ್ಷೆಯಾಗಿದ್ದಲ್ಲಿ ಅದನ್ನು ಪರಿಗಣಿಸಲಾಗುತ್ತದೆ. ಸಮೀಕ್ಷೆಯಾಗದಿದ್ದಲ್ಲಿ ಸಮೀಕ್ಷೆ ನಡೆಸಿ ಅರ್ಹ ಕೃಷಿಕರಿಗೆ ಪರಿಹಾರ ಕಲ್ಪಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಧರ್ ಮಾತನಾಡಿ, ಅಲ್ಪಾವಧಿ ಬೆಳೆಗಳಾದ ಚೆಂಡು ಹೂ, ಸೇವಂತಿಗೆ, ಆಸ್ಟರ್, ಬಹುವಾರ್ಷಿಕ ಬೆಳೆಗಳಾದ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್, ಸಂರಕ್ಷಿತ ಬೇಸಾಯದಲ್ಲಿ ಬೆಳೆಯುವ ಬೆಳೆಗಳಾದ ಗುಲಾಬಿ, ಜರ್ಬೆರಾ, ಕಾರ್ನೇನ್, ಆರ್ಕಿಡ್, ಆಂಥೋರಿಯಂ ಮತ್ತಿತರ ಪುಷ್ಪ ಬೆಳೆಗಳಿಗೆ ಪರಿಹಾರ ದೊರೆಯಲಿದೆ. ಪ್ರತಿ ಫಲಾನುಭಗಳಿಗೆ ಹೂ ಬೆಳೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಸಹಾಯಧನ ದೊರೆಯಲಿದೆ ಎಂದರು.

2019-20ನೇ ಸಾಲಿನ ಹೂ ಬೆಳೆಗಳಿಗೆ ಹಿಂಗಾರು ಬೆಳೆ ಸಮೀಕ್ಷೆ ಆಧಾರವಾಗಿಸಿಕೊಳ್ಳುವುದು ಮತ್ತು ಬಹುವಾರ್ಷಿಕ ಬೆಳೆಗಳಿಗೆ 2019-20 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಆಧಾರವಾಗಿರಿಸಿಕೊಳ್ಳುವುದು. ಮಾ.24 ರ ನಂತರ ನಾಟಿ ಮಾಡಿದ ಬೆಳೆ ಪರಿಗಣಿಸುವುದಿಲ್ಲ. ಬೆಳೆ ಸಮೀಕ್ಷೆಯಲ್ಲಿ ನಮೂದಾಗದಿರುವ ಹೂ ಬೆಳೆಗಾರರಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಪಡೆಯುವುದು ಹಾಗೂ ಈಗಾಗಲೇ ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ರೈತರಿಂದ ಯಾವುದೇ ದಾಖಲಾತಿ ಪಡೆಯುವಂತಿಲ್ಲ. ಫಲಾನುಭವಿ ಹೂ ಬೆಳೆಗಾರರಾಗಿದ್ದು, ಕಡ್ಡಾಯವಾಗಿ ಆರ್‌ಟಿಸಿ ಅವರ ಹೆಸರಿನಲ್ಲಿ ಇರಬೇಕು ಎಂದರು.

ಜಂಟಿ ಖಾತೆಯಿದ್ದಲ್ಲಿ ಒಪ್ಪಿಗೆ ಪತ್ರ ಪಡೆಯಬೇಕು, ಆರ್‌ಟಿಸಿದಾರರು ಮರಣ ಹೊಂದಿದ್ದಲ್ಲಿ ಅವರ ಕುಟುಂಬದವರಿಂದ ಅಗತ್ಯ ದಾಖಲಾತಿ ಪಡೆದು ಸಹಾಯಧನ ವಿತರಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಧರ್ ಮಾಹಿತಿ ನೀಡಿದರು.
ಸಭೆಯಲ್ಲಿ ವಿರಾಜಪೇಟೆ ತಹಸೀಲ್ದಾರ್ ಪಿ.ಎಸ್. ಮಹೇಶ್, ಸೋಮವಾರಪೇಟೆ ತಹಸೀಲ್ದಾರ್ ಗೋವಿಂದ ರಾಜು, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಪ್ರಮೋದ್, ಡೀನಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಪಾಟೀಲ್ ಮತ್ತಿತರರು ಇದ್ದರು.

ಅರ್ಜಿ ನಮೂನೆ, ಆರ್‌ಟಿಸಿ ಮೂಲ ಪ್ರತಿ, ಸ್ವಯಂ ಘೋಷಿತ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ ನೀಡಬೇಕು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಧರ್ (9448999227), ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್-9448336863 (ಮಡಿಕೇರಿ), ಶರತ್-8553933357 (ಸೋಮವಾರಪೇಟೆ), ದೀನಾ-9448049020 (ವೀರಾಜಪೇಟೆ) ಅವರನ್ನು ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net