

ಬೆಂಗಳೂರು: ನಿವೇಶನ ರಹಿತರಿಗೆ ಮನೆ ಹೊಂದಲು ನೀಡಲಾಗುವ ಸಹಾಯಧನವನ್ನು ಅನರ್ಹರ ಬ್ಯಾಂಕ್ ಖಾತೆಗೆ ಜಮೆ ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಪಾಲಿಕೆಯ ಕಲ್ಯಾಣ ವಿಭಾಗದ ಸಹಾಯಕ ಆಯುಕ್ತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯ ಆಯುಕ್ತ ಹಾಗೂ ಲೋಕಾಯುಕ್ತಕ್ಕೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
2022-23, 2023-24 ಮತ್ತು 2024-25ನೇ ಸಾಲಿನಲ್ಲಿ ಬೆಂಗಳೂರು ಅಮೃತ ಮಹೋತ್ಸವ ಯೋಜನೆಯ ಅಡಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಸಹಾಯಧನ ನೀಡಲು ನಿರ್ಧರಿಸಲಾಗಿತ್ತು. ಈ ಸೌಲಭ್ಯವನ್ನು ಅರ್ಜಿ ಸಲ್ಲಿಸಿದವರಿಗೆ ತಲಾ 5 ಲಕ್ಷ ರೂ. ವಿತರಿಸಲಾಗುತ್ತಿತ್ತು. ಆದರೆ, ಸಹಾಯಕ ಆಯುಕ್ತ ನಾಗಭೂಷಣ್ ಅವರು ನಿಯಮ ಉಲ್ಲಂಸಿ ರಾಜೀವ್ ಗಾಂಧಿ ವಸತಿ ನಿಗಮದ ಖಾತೆಗೆ 27.50 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಇದರಿಂದ ಪಾಲಿಕೆ ಹಣವು ಅನರ್ಹರ ಪಾಲಾಗಿದ್ದು, ಸೂರು ಇಲ್ಲದವರಿಗೆ ಸರ್ಕಾರದ ಸೌಲಭ್ಯದಿಂದ ಹೊರಗುಳಿಯುವಂತಾಗಿದೆ. ಈ ಪ್ರಕರಣದ ವಿರುದ್ಧ ರಮೇಶ್ ಅವರು ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್‌ಗೆ ಮಂಗಳವಾರ ದಾಖಲೆ ಸಹಿತ ದೂರು ಸಲ್ಲಿಸಲಾಗಿದೆ.
ಅನರ್ಹರಿಗೆ ಮಣೆ:
ಅರ್ಜಿದಾರರು ಪಾಲಿಕೆ ವ್ಯಾಪ್ತಿಯಲ್ಲಿ ವಾಸ ಇರಬೇಕು. ವಾರ್ಷಿಕ ಆದಾಯ 3 ಲಕ್ಷ ರೂ. ಮೀರಿರಬಾರದು ಎಂಬುದು ಸೇರಿ ಹಲವು ಷರತ್ತು ವಿಧಿಸಲಾಗಿತ್ತು. ಜತೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರ ಹಾಲಿ ವಾಸ್ತವ್ಯದ ಬಗ್ಗೆ ಮಹಜರು ನಡೆಸಿ ನಿವೇಶನರಹಿತರೆಂದು ದೃಢಪಡಿಸಿಕೊಳ್ಳಬೇಕಿತ್ತು. ಆದರೆ, ಈ ಯಾವ ನಿಯಮ, ಮಾರ್ಗಸೂಚಿಯನ್ನು ಪಾಲಿಸದೆ ಫಲಾನುಭವಿಗಳ ಪಟ್ಟಿಯನ್ನು ಮಾರ್ಪಡಿಸಿ 550 ಮಂದಿ ಅನರ್ಹರಿಗೆ ಮಣೆ ಹಾಕಿದ ಪರಿಣಾಮ ಸರ್ಕಾರದ ಕೋಟ್ಯಂತರ ರೂ. ನಿರರ್ಥಕವಾಗಿದೆ. ದಲ್ಲಾಳಿಗಳೊಂದಿಗೆ ಷಾಮೀಲಾಗಿ ಅಧಿಕಾರಿಗಳು ಭ್ರಷ್ಟಾಚಾರ ಎಸೆಗಿದ್ದಾರೆ. ಈ ಮಾಹಿತಿ ಮೇಲಾಧಿಕಾರಿಗಳಿಗೆ ತಿಳಿದಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.