

ಚನ್ನಗಿರಿ: ಡಾ.ವಿರೇಂದ್ರ ಹೆಗ್ಗಡೆಯವರು ಮಹಿಳೆಯರಿಗಾಗಿ ಸ್ತ್ರೀಶಕ್ತಿ ಸಂಘ, ಜ್ಞಾನ ವಿಕಾಸ ಕೇಂದ್ರ, ಸ್ವಸಹಾಯ ಸಂಘ ತೆರೆಯುವ ಮೂಲಕ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶ್ರೀಧರ್ ಗುಂಡ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಕುಡಿಯುವ ನೀರಿನ ಫಿಲ್ಟರ್ ಖರೀದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧ್ದಿ ಸಂಸ್ಥೆ ವತಿಯಿಂದ 20 ಸಾವಿರ ರೂ. ಸಹಾಯಧನದ ಚೆಕ್ ವಿತರಿಸಿ ಗುರುವಾರ ಮಾತನಾಡಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಧರ್ಮಸ್ಥಳ ಸಂಸ್ಥೆ ಪಣ ತೊಟ್ಟಿದೆ. ಸಂಸ್ಥೆ ಹಣಕಾಸಿನ ವ್ಯವಹಾರದ ಜತೆಯಲ್ಲಿ ಜ್ಞಾನ ನೀಡುವ ಕೆಲಸ ಮಾಡುತ್ತಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ ಎಂದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರದ್ಧ್ದಾ ಕೇಂದ್ರದ ಮೂಲಕ 74 ದೇವಸ್ಥಾನದ ಆವರಣಗಳನ್ನು ಸ್ವಚ್ಛಗೊಳಿಸಲಾಗಿದೆ. ಸ್ವಾಸ್ಥೃ ಸಂಕಲ್ಪ ಯೋಜನೆಯಡಿ 10 ಶಾಲೆಗಳಲ್ಲಿ 1500 ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರ ಇರುವಂತೆ ಅರಿವು ಮೂಡಿಸಲಾಗಿದೆ, ಸುಮಾರು 5 ಕೆರೆಗಳ ಪುನಶ್ಚೇತನ ಮಾಡುವ ಮೂಲಕ ಕೆರೆಗಳಿಗೆ ನೀರು ಬರುವಂತೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕಾಲೇಜಿನ ಪ್ರಾಚಾರ್ಯೆ ವೈಜಯಂತಿ, ಉಪನ್ಯಾಸಕರಾದ ಭರತ್, ಟಿ. ಯೋಗೇಶ್ವರ್, ಜಿ.ಸಿ. ತಿಪ್ಪೇಸ್ವಾಮಿ, ಮೇಲ್ವಿಚಾರಕಿ ಶಾರದ ಇದ್ದರು.