ಗೋವಿನಜೋಳಕ್ಕೆ ಸಹಾಯಧನ

17Khanapur1_WEb
Published on

ಖಾನಾಪುರ: ಕಳೆದ ಮಾರ್ಚ್-ಏಪ್ರಿಲ್‌ನಲ್ಲಿ ಗೋವಿನಜೋಳ (ಮೆಕ್ಕೆಜೋಳ) ಬೆಳೆದ ರೈತರಿಗೆ ಸರ್ಕಾರದಿಂದ ಮಂಜೂರಾದ ಸಹಾಯಧನ ವಿತರಿಸುವಲ್ಲಿ ಖಾನಾಪುರ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದಾಮೋದರ ಚವ್ಹಾಣ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ 1635 ರೈತರ ಪೈಕಿ 1010 ರೈತರಿಗೆ ಈಗಾಗಲೇ ತಲಾ 5 ಸಾವಿರ ರೂ. ಸಹಾಯಧನ ಮುಟ್ಟಿದೆ. ಇನ್ನುಳಿದ 625 ರೈತರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ. ಕೃಷಿ ಇಲಾಖೆ ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳು ಹಾಗೂ 6 ಕೃಷಿ ಪತ್ತಿನ ಪ್ರಾಥಮಿಕ ಸಂಘಗಳ ಮೂಲಕ ರೈತರಿಗೆ ಸರ್ಕಾರದ ಸಹಾಯಧನದಡಿ ಬಿತ್ತನೆ ಬೀಜ ವಿತರಿಸಿದೆ. ಈವರೆಗೆ ಇದುವರೆಗೂ 49 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 21 ಸಾವಿರ ಹೆಕ್ಟೇರ್ ಭತ್ತ, 12 ಸಾವಿರ ಹೆಕ್ಟೇರ್ ಕಬ್ಬು ಸೇರಿ ಒಟ್ಟು ಶೇ.80ರಷ್ಟು ಬಿತ್ತನೆ ಮಾಡಲಾಗಿದೆ. 5540 ಮೆ.ಟನ್ ರಸಗೊಬ್ಬರದ ಬೇಡಿಕೆಯಿದ್ದು, ಈಗಾಗಲೇ 3470 ಮೆ.ಟನ್ ಪೂರೈಕೆಯಾಗಿದೆ. 2017-18ನೇ ಸಾಲಿನಲ್ಲಿ ಬೆಳೆ ವಿಮೆ ತುಂಬಿದ ತಾಲೂಕಿನ ರೈತರಿಗೆ 1.58 ಕೋಟಿ ರೂ.ಮೊತ್ತದ ವಿಮಾ ಪರಿಹಾರ ಹಾಗೂ ಕಳೆದ ವರ್ಷ ವಿಮಾ ಕಂತು ತುಂಬಿದ ರೈತರಿಗೆ 63.61 ಲಕ್ಷ ರೂಪಾಯಿ ವಿಮಾ ಪರಿಹಾರ ಮಂಜೂರಾಗಿದೆ. ಈ ವರ್ಷದ ಮುಂಗಾರು ಹಂಗಾಮಿನ ವಿಮಾ ಕಂತು ತುಂಬಲು ಜುಲೈ ತಿಂಗಳ ಅಂತ್ಯದವರೆಗೆ ಕಾಲಾವಕಾಶವಿದ್ದು, ರೈತರು ಸದುಪಯೋಗ ಪಡೆಯಬೇಕು ಎಂದರು. ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ತಹಸೀಲ್ದಾರ್ ರೇಷ್ಮಾ ತಾಳಿಕೋಟಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net