

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಆನೆ ಬೆಟ್ಟದ ಶ್ರೀ ಸುಬ್ರಹ್ಮಣ್ಯಸ್ವಾಮಿ ಜಾತ್ರೆ ಪ್ರತಿ ವರ್ಷದಂತೆ ಸೋಮವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಕಾವಡಿಗಳ ಉತ್ಸವ ನೆರವೇರಿತು. ಬೆಳಗ್ಗೆಯಿಂದ ಸಂಜೆವರೆಗೂ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಸಂಜೆ ಬೆಟ್ಟದ ಮೇಲೆ ರಥೋತ್ಸವ ನಡೆಯಿತು. ವಿಶೇಷವಾಗಿ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಉತ್ಸವದ ನಂತರ ಸಂಜೆ 7 ಗಂಟೆಗೆ ರಂಗುರಂಗಿನ ಮದ್ದುಗುಂಡು ಪ್ರದರ್ಶನ ಹಾಗೂ ಭದ್ರಾವತಿ ಪಳನಿಸ್ವಾಮಿ ಅವರಿಂದ ಪಂಬೆ ವಾದ್ಯ ಏರ್ಪಡಿಸಲಾಗಿತ್ತು. ಬುಧವಾರ ಅರಸೀಕೆರೆ ನಗರದ ರಾಜ ಬೀದಿಗಳಲ್ಲಿ ಶ್ರೀ ಸ್ವಾಮಿ ಅವರ ಉತ್ಸವ ಏರ್ಪಡಿಸಲಾಗಿದೆ ಎಂದು ಅರ್ಚಕ ಚಂದ್ರಣ್ಣ ತಿಳಿಸಿದ್ದಾರೆ. ಜಾತ್ರೆ ಮಹೋತ್ಸವ ಪ್ರಸಾದ ಸೇವಾರ್ಥವನ್ನು ಬಿಲ್ಡಿಂಗ್ ಕಂಟ್ರಾಕ್ಟರ್ ಎಂ.ಹರೀಶ್ ಹಾಗೂ ರಥೋತ್ಸವದ ಸೇವಾರ್ಥಕರಾಗಿ ಎ.ಎನ್ ತಿಮ್ಮಪ್ಪ ಅವರ ಮಕ್ಕಳಿಂದ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಕ್ತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.