ಆ್ಯಪ್‌ನಲ್ಲೇ ಆಕ್ಷೇಪಣೆ ಸಲ್ಲಿಸಿ, ಜಂಟಿ ಕೃಷಿ ನಿರ್ದೇಶಕರ ಹೇಳಿಕೆ ಬೆಳೆ ಮಾಹಿತಿ ದಾಖಲೆಗೆ ಮನವಿ

popcorn-resicore-trial-F4
Published on

ಬೆಂಗಳೂರು ಗ್ರಾಮಾಂತರ: ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಮೂಲಕ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಸುತ್ತಿದ್ದು, ಫೋಟೋ ಅಪ್‌ಲೋಡ್ ಮಾಡಿರುವುದರಲ್ಲಿ ಲೋಪದೋಷ ಕಂಡುಬಂದಲ್ಲಿ ರೈತರು ಬೆಳೆದರ್ಶಕ 2020 ಆ್ಯಪ್‌ನಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ತಿಳಿಸಿದ್ದಾರೆ.

ಸಮೀಕ್ಷೆ ಮೂಲಕ ಸಂಗ್ರಹಿಸಿದ ಬೆಳೆ ಮಾಹಿತಿಯು, ಮೇಲ್ವಿಚಾರಕರ ಮೂಲಕ ಅನುಮೋದನೆಗೊಂಡ ನಂತರ, ಈ ಮಾಹಿತಿಯನ್ನು ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗಾಗಿ, ಬೆಳೆ ವಿಮೆ ಯೋಜನೆಗಾಗಿ, ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ. ಆದ್ದರಿಂದ ರೈತರು ಬೆಳೆಗಳನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು ಆ್ಯಪ್‌ನಲ್ಲಿ ಪರಿಶೀಲಿಸಬಹುದಾಗಿದೆ. ಪ್ಲೇಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.

ಆ್ಯಪ್ ವಿಶೇಷತೆ: ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ ಸಮಯದಲ್ಲಿ ಜಮೀನಿನಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ ಛಾಯಾ ಚಿತ್ರ ವೀಕ್ಷಿಸಬಹುದು. ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆ ವಿವರ ಪಡೆಯಬಹುದು, ಅಲ್ಲದೆ ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಅಂಗೀಕರಿಸಿದ್ದಾರೋ ಇಲ್ಲವೋ ಎಂದು ಷರಾ ಕಾಲಂನಲ್ಲಿ ತಿಳಿಯಬಹುದಾಗಿದೆ. ಒಂದು ವೇಳೆ ವಿವರ ತಪ್ಪಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಹಾಗೂ ಮೇಲ್ವಿಚಾರಣೆ ಮಾಡುವ ಸರ್ಕಾರಿ ಅಧಿಕಾರಿಗಳು ಆಕ್ಷೇಪಣೆ ಕುರಿತು ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯಬಹುದಾಗಿದೆ.

ಎಂದು ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ದಾಖಲಾಗಿರುವ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಮೇಲ್ವಿಚಾರಕರಿಗೆ ಗುರುತಿಸಲಾಗುತ್ತದೆ. ಮೇಲ್ವಿಚಾರಕರು ಪರಿಶೀಲಿಸಿ, ಅವುಗಳನ್ನು ತುರ್ತಾಗಿ ಇತ್ಯರ್ಥಪಡಿಸಲಿದ್ದಾರೆ. ಮೇಲ್ವಿಚಾರಕರು ಸ್ವೀಕೃತವಾಗಿರುವ ಪ್ರತಿ ಆಕ್ಷೇಪಣೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈಗಾಗಲೇ ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯೊಂದಿಗೆ ಹೋಲಿಸಿ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಿದ್ದಾರೆ. ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿ ಆಧಾರದ ಮೇರೆಗೆ ಇತ್ಯರ್ಥಪಡಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ ಮೇಲ್ವಿಚಾರಕರೇ ಖುದ್ದಾಗಿ ಮಹಜರು ದಾಖಲಿಸುವ ಮೂಲಕ ಆಕ್ಷೇಪಣೆ ಇತ್ಯರ್ಥಪಡಿಸಲಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷಿ ಬೆಳೆ ಸರ್ವೇ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಈಗಾಗಲೇ ಜಿಲ್ಲೆಯಲ್ಲಿ ಬಹಳಷ್ಟು ರೈತರು ಖುದ್ದು ಬೆಳೆ ಸರ್ವೇ ನಡೆಸಿ ಮಾಹಿತಿ ದಾಖಲಿಸುತ್ತಿದ್ದಾರೆ. ಕೆಲವರಿಗೆ ಗೊಂದಲವಿದೆ. ಅಂಥ ರೈತರಿಗೆ ಸ್ಥಳೀಯ ನಿವಾಸಿಗಳಿಂದ ಮಾಹಿತಿ ನೀಡಲಾಗುತ್ತಿದೆ. ಕೃಷಿ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಯೋಜನೆಯಡಿ ಯಾವುದೇ ಆಕ್ಷೇಪಣೆಯಿದ್ದಲ್ಲಿ ಬೆಳೆದರ್ಶಕ ಆ್ಯಪ್ ಮೂಲಕ ನೆರವು ಪಡೆಯಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net