ನೂತನ ಪದ್ಧತಿಯ ವಿವರ ಸರ್ಕಾರಕ್ಕೆ ಸಲ್ಲಿಸಿ

dc
Published on

ನರಗುಂದ: ಪಟ್ಟಣದ ವಿವಿಧೆಡೆ ಕೈಗೊಂಡಿರುವ ನಗರೋತ್ಥಾನ 4ನೇ ಹಂತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೋಮವಾರ ಪರಿಶೀಲಿಸಿದರು.

ಪಟ್ಟಣದ ಸವದತ್ತಿ ರಸ್ತೆ ಹೊರವಲಯದಲ್ಲಿರುವ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, 1 ಕೋಟಿ 29 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಸ ವಿಲೇವಾರಿಯ ಪ್ರೊಸೆಸಿಂಗ್ ಶೆಡ್ ನಿರ್ಮಾಣ ಕಾಮಗಾರಿ, ರಸ್ತೆ, ಚರಂಡಿ, ಶೌಚಗೃಹ ಕಾಮಗಾರಿಗಳನ್ನು ಪರಿಶೀಲಿಸಿದರು. ನಗರದ ಮನೆಗಳಿಂದ ನಿತ್ಯ ಸಂಗ್ರಹಿಸುವ 250 ಕೆಜಿ ಹಸಿ ಕಸದಿಂದ ತಯಾರಿಸುವ ಬಯೋಗ್ಯಾಸ್, ಎರೆಹುಳು ಘಟಕದಿಂದ 1 ಟನ್ ಪರಿಶುದ್ಧವಾದ ಗೊಬ್ಬರ ತಯಾರಿಕೆ, ಮರುಬಳಕೆಗೆ ಬಾರದ ವಿವಿಧ ವಸ್ತು, ಸಾಮಗ್ರಿಗಳಿಂದ ಉದ್ಯಾನದಲ್ಲಿ ಆಸನಗಳನ್ನು ನಿರ್ಮಿಸಿರುವ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

2021-22ನೇ ಸಾಲಿನ ನಗರೋತ್ಥಾನ ಯೋಜನೆಯ ಒಟ್ಟು 10 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ 4 ಕೋಟಿ ರೂ.ಗಳಲ್ಲಿ ಪಟ್ಟಣದ ದಂಡಾಪೂರ ಬಡಾವಣೆಯ ಹಿಂದು ರುದ್ರ ಭೂಮಿಯ ಬಳಿ ಕೈಗೊಂಡಿರುವ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ. ಮೀನಾಕ್ಷಿ ಭವನದಿಂದ ಸಂಗೊಳ್ಳಿ ರಾಯಣ್ಣನ ವೃತ್ತದವರೆಗಿನ ಚರಂಡಿ, ಪಿಎಲ್‌ಡಿ ಬ್ಯಾಂಕ್ ಎದುರಿಗೆ ನಿರ್ಮಿಸಿರುವ ಸಿಸಿರಸ್ತೆ, ಚರಂಡಿ. ಸೋಮಾಪೂರ ರಾಚಯ್ಯನಗರದ ವಾಸು ಜೋಗಣ್ಣವರ ಮನೆ ಹತ್ತಿರ ನಿರ್ಮಿಸಿರುವ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

ಎರೆಹುಳು ಘಟಕದಲ್ಲಿ ತಯಾರಿಸಿರುವ ಪರಿಶುದ್ಧವಾದ 1 ಕೆಜಿ ಎರೆಹುಳು ಗೊಬ್ಬರವನ್ನು ಪರೀಕ್ಷೆಗಾಗಿ ಜಿಲ್ಲಾಧಿಕಾರಿ ಮನೆಗೆ ತೆಗೆದುಕೊಂಡು ಹೋದರು. ಬಯೋಗ್ಯಾಸ್‌ನ ಹೊಸ ಆವಿಷ್ಕಾರದ ವಿವರ ದಾಖಲಿಸಿ ಸರ್ಕಾರಕ್ಕೆ ಮಾದರಿ ಕಾರ್ಯದ ಬಗ್ಗೆ ತಕ್ಷಣವೇ ವರದಿ ಸಲ್ಲಿಸುವಂತೆ ಪುರಸಭೆ ಹಿರಿಯ ಆರೋಗ್ಯ ನೀರಿಕ್ಷಕ ಸಂಗಮೇಶ ಬ್ಯಾಳಿ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ, ಕಾರ್ಯಪಾಲಕ ಇಂಜಿನಿಯರ್ ಶರಣಪ್ಪ ಓಣಿ, ಎಇಇ ಎಸ್.ಬಿ. ಮರಿಗೌಡ್ರ, ಕಿರಿಯ ಇಂಜಿನಿಯರ್ ಎಸ್.ಸಿ. ಹುಣಸೀಮರದ, ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸಂಗಮೇಶ ಬ್ಯಾಳಿ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ ಗವಿಮಠ, ರಾಜು ಈಟಿ, ರಾಚಪ್ಪ ಕೆರೂರ, ಅಣ್ಣಪ್ಪ ದೊಡಮನಿ, ರವಿ ಚಕ್ರಸಾಲಿ, ಮಹಾಂತೇಶ ಚಲವಾದಿ, ಸಿದ್ದು ಕಿಲಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net