ಪತ್ರ ಸಲ್ಲಿಸಿ ಕೈಗಾರಿಕೆ ಆರಂಭಿಸಿ

01014
Published on

ಬೆಳಗಾವಿ: ರಾಜ್ಯದಲ್ಲಿ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಆರಂಭಿಸಲು ಅನುಮತಿ ಅಗತ್ಯವಿಲ್ಲ. ಆಯಾ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸ್ವಯಂ ಘೋಷಣಾಪತ್ರ ಸಲ್ಲಿಸಿ ಕೈಗಾರಿಕೆ ಆರಂಭಿಸಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಬೆಳಗಾವಿ ಉದ್ಯಮಬಾಗದಲ್ಲಿರುವ ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಶನಿವಾರ ಕೈಗಾರಿಕೋದ್ಯಮಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿ, ಮೇ 4ರಿಂದ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಕೈಗಾರಿಕೆ ಆರಂಭಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆ. ಕೈಗಾರಿಕೆಗಳ ಆರಂಭಕ್ಕೆ ಅಗತ್ಯ ನೆರವು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.

ಸಣ್ಣ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಆದಷ್ಟು ಬೇಗ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ವಿಶೇಷ ಪ್ಯಾಕೇಜ್ ಘೋಷಣೆಗೆ ಈಗಾಗಲೇ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಕಾರ್ಮಿಕರಿಗೆ ಪಾಸ್ ಅಗತ್ಯವಿಲ್ಲ. ವಿದ್ಯುತ್ ಬಿಲ್ ಭರಿಸಲು ಕಾಲಾವಕಾಶ ನೀಡಲಾಗುವುದು.

ಲಾಕ್‌ಡೌನ್ ಮುಂದುವರಿದರೂ ಹಂತ ಹಂತವಾಗಿ ವಿವಿಧ ಬಗೆಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಝೋನ್‌ಗಳ ಆಧಾರದ ಮೇಲೆ ಕೈಗಾರಿಕೆ ಹಾಗೂ ಇನ್ನಿತರ ಚಟುವಟಿಕೆಗಳಿಗೂ ಅನುಮತಿ ನೀಡಲಾಗುವುದು ಎಂದರು.

ಬೇಕಿಲ್ಲ ಪಾಸ್: ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀಧರ ಉಪ್ಪಿನ ಮಾತನಾಡಿ, ಕೈಗಾರಿಕಾ ಕಾರ್ಮಿಕರಿಗೆ ಅಗತ್ಯವಿರುವ ಪಾಸ್ ವಿತರಿಸಬೇಕು. ಮುಂದಿನ 4 ತಿಂಗಳ ವರೆಗೆ ಕೆಲಸದ ಅವಧಿ ವಿಸ್ತರಿಸಬೇಕು. ಉದ್ಯಮಿಗಳಿಗೆ ಶೇ.3ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಕಾರ್ಮಿಕರಿಗೆ ಪಾಸ್ ಅಗತ್ಯವಿಲ್ಲ. ಆದರೆ, ಬೈಕ್‌ನಲ್ಲಿ ಒಬ್ಬರೇ ಬರಬಹುದು. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಿಂದ ಕಾರ್ಮಿಕರು ಮುಕ್ತವಾಗಿ ಸಂಚರಿಸಬಹುದು ಎಂದರು.

ಅಧಿಕಾರಿ ನೇಮಿಸಿ: ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ ಜವಳಿ ಮಾತನಾಡಿ, ಕೈಗಾರಿಕೆಗಳ ಜತೆಗೆ ಕಚ್ಚಾ ಸಾಮಗ್ರಿ ಪೂರೈಕೆ ಘಟಕಗಳನ್ನು ಆರಂಭಿಸಿದರೆ ಮಾತ್ರ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು. ಕೈಗಾರಿಕೆಗಳು ಸರಾಗವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಸಿಮೆಂಟ್ ಹಾಗೂ ಇನ್ನಿತರ ವಸ್ತುಗಳ ಬೆಲೆ ದಿಢೀರ್ ಏರಿಕೆಯಾಗಿದ್ದು, ನಿಯಂತ್ರಣಕ್ಕೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಇದಕ್ಕೆ ಸಚಿವ ಸುರೇಶ ಅಂಗಡಿ ಪ್ರತಿಕ್ರಿಯಿಸಿ, ಸ್ಟೀಲ್ ಮತ್ತು ಸಿಮೆಂಟ್ ಮುಕ್ತ ಮಾರುಕಟ್ಟೆಯಾಗಿರುವುದರಿಂದ ದರ ನಿಗದಿ ಮಾಡುವುದು ಸಾಧ್ಯವಿಲ್ಲ. ಲಾಕ್‌ಡೌನ್ ಮುಗಿದು ಸಂಚಾರ ಆರಂಭಗೊಂಡರೆ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು.

ಶಾಸಕರಾದ ಅಭಯ ಪಾಟೀಲ, ಪಿ.ರಾಜೀವ್, ಅನಿಲ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ, ಕೋವಿಡ್-19 ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net