ರಸ್ತೆ ಸುರಕ್ಷತಾ ನಿಯಮ ಕುರಿತ ವರದಿ ಸಲ್ಲಿಸಿ; ಜಿಲ್ಲಾಧಿಕಾಟಿ ಟಿ.ಭೂಬಾಲನ್

RASTE SURAKSHA MEETING
ವಿಜಯಪುರ ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿದರು. ಎಸ್‌ಪಿ ಲಕ್ಷ್ಮಣ ನಿಂಬರಗಿ ಇದ್ದಾರೆ.
Published on

ವಿಜಯಪುರ: ಅಪಘಾತ ತಡೆಯುವ ನಿಟ್ಟಿನಲ್ಲಿ ರೂಪಿಸಿದ ರಸ್ತೆ ಸುರಕ್ಷತಾ ನಿಯಮ ಪಾಲನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಅಪಘಾತ ತಡೆಗೆ ಕೈಗೊಂಡಿರುವ ಕ್ರಮ ಹಾಗೂ ರಸ್ತೆ ಸುರಕ್ಷತಾ ಸಮಿತಿ ಸಭೆಗಳಲ್ಲಿ ನೀಡಿದ ಸಲಹೆ-ಸೂಚನೆಗಳನ್ನು ಪಾಲಿಸಿ ಕೈಗೊಂಡಿರುವ ಕ್ರಮಗಳ ಕುರಿತು ಸ್ಥಳಕ್ಕೆ ಖುದ್ದಾಗಿ ಅಧಿಕಾರಿಗಳು ಹೋಗಿ ಪರಿಶೀಲನೆ ನಡೆಸಿ ಛಾಯಾಚಿತ್ರದೊಂದಿಗೆ 15 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ಅಪಘಾತ ಪ್ರಮಾಣ ಕಡಿಮೆಗೊಳಿಸಲು ವಿವಿಧ ಸಭೆಗಳನ್ನು ನಡೆಸಿ, ಸೂಕ್ತ ಸಲಹೆ ಹಾಗೂ ಸೂಚನೆ ನೀಡಲಾಗಿದೆ. ಈ ಸೂಚನೆಗಳು ಪಾಲನೆಯಾಗಿರುವ ಕುರಿತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪಘಾತ ತಡೆ, ರಸ್ತೆ ಸುರಕ್ಷತೆ, ವಾಹನ ಚಾಲಕರ ಜಾಗೃತಿಗಾಗಿ ಅಳವಡಿಸಲಾದ ಸೈನ್‌ಬೋರ್ಡ್, ಹಂಪ್ಸ್‌ಗಳು, ಅಪಘಾತ ಹೆಚ್ಚಾಗಿ ಸಂಭವಿಸುವ ರಸ್ತೆಯ ತಿರುವಿನಲ್ಲಿ ಅಳವಡಿಸಲಾದ ಸೈನ್‌ಬೋರ್ಡ್ ಸೇರಿದಂತೆ ಅಪಘಾತ ತಡೆಗೆ ಜಿಲ್ಲೆಯಾದ್ಯಂತೆ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಸಿಂದಗಿ ನಾಕಾದಿಂದ ಆರ್‌ಎನ್‌ಎಸ್ ಮೋಟರ್ಸ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಸೇವಾ ರಸ್ತೆಗಳಲ್ಲಿ ನಿಲ್ಲಿಸಲಾಗುತ್ತಿರುವ ಗೂಡ್ಸ್ ವಾಹನಗಳನ್ನು ತೆರವುಗೊಳಿಸಲು ಕ್ರಮ ವಹಿಸಿ ಸುಗಮ ಸಂಚಾರ ವ್ಯವಸ್ಥೆಗೆ ಕ್ರಮ ವಹಿಸಬೇಕು. ಬಾಗಲಕೋಟೆ ರಸ್ತೆಯಲ್ಲಿರುವ ಮೇಲ್ಸೇತುವೆಯ ಮೇಲಿನ ಹಾಳಾದ ರಸ್ತೆಗಳನ್ನು ದುರಸ್ತಿಗೆ ಕ್ರಮ ವಹಿಸಬೇಕು. ರಸ್ತೆ ಮಧ್ಯದಲ್ಲಿ ಬರುವ ಹಂಪ್ಸ್‌ಗಳಿಗೆ ಸೈನ್ ಬೋರ್ಡ ಹಾಕಬೇಕು. ಮುತ್ತಗಿ, ಹಿಟ್ಟಿನಹಳ್ಳಿ, ಮನಗೂಳಿ ರಾಷ್ಟ್ರೀಯ ಹೆದ್ದಾರಿಯನ್ನು ಅಪಘಾತ ಸ್ಥಳವೆಂದು ಗುರುತಿಸಲಾಗಿದ್ದು, ಅಲ್ಲಿ ಅಪಘಾತಗಳು ಸಂಭವಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದರು.

ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಬಾಗಲಕೋಟೆ-ಸೋಲಾಪುರ ಹೆದ್ದಾರಿಯ ಅಂದಾಜು 135 ಕಿಮೀ ರಸ್ತೆಯಲ್ಲಿ ಪ್ರತಿ 10 ಕಿಮೀಗೆ ಒಂದರಂತೆ ಸಿಸಿ ಟಿವಿ ಕ್ಯಾಮರಾ ಅಳವಡಿಸಲು ಕ್ರಮ ವಹಿಸಬೇಕು. ಹಂಪ್ಸ್‌ಗಳಿಗೆ ಸೋಲಾರ್ ಸ್ಟೀಕರ್ ಅಳವಡಿಸಬೇಕು. ಬ್ಯಾರಿಕೇಡ್‌ಗಳ ಬದಲಾಗಿ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು, ಬ್ರಿಕ್ಸ್‌ಗಳನ್ನು ಅಳವಡಿಸಬೇಕು. ವಿಜಯಪುರ ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಕ್ರಮ ವಹಿಸಬೇಕು ಎಂದರು.

ಕೊಲ್ಹಾರ ಸೇತುವೆ ಮೇಲೆ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಬೇಕು. ಸೇತುವೆ ಮೇಲೆ ಬೀದಿ ದೀಪಗಳ ಅಳವಡಿಕೆಗೆ ಟೆಂಡರ್ ಕರೆಯಲಾಗಿದ್ದು, ತಕ್ಷಣವೇ ಬೀದಿ ದೀಪಗಳ ಅವಳಡಿಕೆಗೆ ಕ್ರಮ ವಹಿಸಬೇಕು. ಬಾಗಲಕೋಟೆಯಿಂದ ವಿಜಯಪುರ ನಗರಕ್ಕೆ ಬರುವ ವರ್ತುಲ ರಸ್ತೆಯ ಮೇಲ್ಸೇತುವೆಯ ಎರಡು ಬದಿಯ ಸೇವಾ ರಸ್ತೆಯಲ್ಲಿ ಬೀದಿ ದೀಪಗಳ ಸೂಚನಾ ಫಲಕಗಳನ್ನು ಅಳವಡಿಕೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಎಎಸ್‌ಪಿ ಶಂಕರ ಮಾರಿಹಾಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ವಿನಯಕುಮಾರ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೋಳಿ, ಅಬಕಾರಿ ಇಲಾಖೆ ಉಪ ಆಯುಕ್ತ ಮುರಳಿಧರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ಹೊಸಮನಿ, ಪೀಟರ್ ಅಲೆಕ್ಸಾಂಡರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net