ಕಸಮುಕ್ತ ನಗರ ಅಫಿಡವಿಟ್ ಸಲ್ಲಿಸಿ

NGT meeting
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮುಂದಿನ ಎರಡು ತಿಂಗಳ ಅವಧಿಯಲ್ಲಿ ಹು-ಧಾ ಅವಳಿ ನಗರವನ್ನು ಕಸಮುಕ್ತ ನಗರವನ್ನಾಗಿ ಮಾಡುವ ಜವಾಬ್ದಾರಿಯನ್ನು ಒಪ್ಪಿಸಿ ಹು-ಧಾ ಮಹಾನಗರ ಪಾಲಿಕೆಯ ಎಲ್ಲ ವಲಯ ಅಧಿಕಾರಿಗಳಿಂದ ಶಪಥ ಪತ್ರ (ಅಫಿಡವಿಟ್) ಪಡೆಯಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕಣ (ಎನ್​ಜಿಟಿ)ದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ, ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2016 ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ವಹಣೆ ವಿಷಯಗಳ ಕುರಿತು ಎನ್​ಜಿಟಿ ಆದೇಶ ಅನುಷ್ಠಾನಗೊಳಿಸಿರುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಕ್ಟೋಬರ್ 28ರ ಒಳಗೆ ಹು-ಧಾ ಕಸ್ತಮುಕ್ತ ನಗರವನ್ನಾಗಿ ಘೊಷಿಸುಲಾಗುವುದು ಎಂದು ನೀವು (ಪಾಲಿಕೆ ಆಯುಕ್ತರು) ನನಗೆ ಶಪಥ ಪತ್ರ ಸಲ್ಲಿಸಬೇಕು ಎಂದರು.

ಈ ಎರಡು ತಿಂಗಳ ಅವಧಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ, ಕಸ ವಿಂಗಡಣೆ, ಬ್ಲಾಕ್ ಸ್ಪಾಟ್ ನಿಮೂಲನೆಯಲ್ಲಿ ಶೇ.100 ರಷ್ಟು ಗುರಿ ಸಾಧಿಸಬೇಕು. ಸ್ವಚ್ಛತೆ ಎಂಬುದು ಕಣ್ಣಿಗೆ ಗೋಚರಿಸುವಂತೆ ಇರಬೇಕು ಹೊರತು, ಕಚೇರಿ ಕಡತಗಳಲ್ಲಿ ದಾಖಲಿಸುವಂಥದಲ್ಲ. ಈ ಸಂಬಂಧ ಜನಪ್ರತಿನಿಧಿಗಳು (ಪಾಲಿಕೆ ಸದಸ್ಯರು), ಗಣ್ಯ ನಾಗರಿಕರು ಹಾಗೂ ಅಧಿಕಾರಿಗಳನ್ನೊಳಗೊಂಡು ಸಭೆ ನಡೆಸಬೇಕು ಎಂದು ಹೇಳಿದರು. ವಾರದೊಳಗೆ ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಭವನದಲ್ಲಿ ಸಭೆ ನಡೆಸುವುದಾಗಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಒಪ್ಪಿಗೆ ಸೂಚಿಸಿದರು.

ಅವಳಿ ನಗರ ಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳಿವೆ. ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ವರದಿಗಳು ಪ್ರಕಟವಾಗುತ್ತವೆ. ಆದರೆ, ನಿಮ್ಮಿಂದ ಸ್ವಚ್ಛತೆ ಯಾಕೆ ಆಗುತ್ತಿಲ್ಲ ? ಜನರ ಸಹಭಾಗಿತ್ವದೊಂದಿಗೆ ಶಾಶ್ವತ ಕ್ರಮ ಕೈಗೊಳ್ಳಿ. ನಗರದಲ್ಲಿ ಪಾದಚಾರಿ ಮಾರ್ಗಗಳು ಖಾಸಗಿ ಆಸ್ತಿಗಳಾಗಿ ಪರಿವರ್ತನೆ ಆಗಿವೆ, ಅಂಗಡಿಕಾರರು ಫುಟ್​ಪಾತ್ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಫುಟ್​ಪಾತ್​ಗಳು ಜನರ ಓಡಾಟಕ್ಕೆ ಮುಕ್ತಗೊಳಿಸಬೇಕು. ಫುಟ್​ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪರಿಸರ ಅಧಿಕಾರಿ ಜಗದೀಶ, ಪಾಲಿಕೆ ಹೆಚ್ಚುವರಿ ಆಯುಕ್ತ ಆರ್. ವಿಜಯಕುಮಾರ, ಇಇ ಸಂತೋಷ ಯರಂಗಳಿ, ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net