ಉತ್ತರ ಕನ್ನಡಕ್ಕೆ 100 ಹೊಸ ಬಸ್‌ ಗಳಿಗೆ ಪ್ರಸ್ತಾವನೆ ಸಲ್ಲಿಕೆ

Nwkrtc-News-Bus.
Published on

ಕಾರವಾರ:ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ಜಿಲ್ಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲು ಹೊಸದಾಗಿ 100 ಬಸ್ ಗಳ ಬೇಡಿಕೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಮ್ಮ ಕೇಂದ್ರ ಕಚೇರಿಗೆ ಈಗಾಗಲೇ ಸಲ್ಲಿಸಿದ್ದಾರೆ.
ಜಿಲ್ಲೆಯ ಶಿರಸಿ ವಿಭಾಗದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಸೆಪ್ಟಂಬರ್ 10 ರ ವರೆಗೆ 1,54,34,333 ಮಂದಿ ಮಹಿಳೆಯರು ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಸಂಚರಿಸಿದ್ದು, 42,16,28,153 ರೂ ಮೊತ್ತದ ಟಿಕೆಟ್ ವಿತರಿಸಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಶಿರಸಿ ವಿಭಾಗ ವ್ಯಾಪ್ತಿಯಲ್ಲಿ ಈಗಾಗಲೇ 516 ಬಸ್ ಗಳ ಮೂಲಕ ದೈನಂದಿನ ಸಾರಿಗೆ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು, ಪ್ರಸ್ತುತ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ.

ಹೆಚ್ಚಿನ ಬಸ್‌ಗಳು ಹಳೆಯದಾಗಿವೆ. ಇನ್ನು ಹೆಚ್ಚುವರಿ ರೂಟ್‌ಗಳಲ್ಲಿ ಬಸ್‌ ಓಡಿಸಿ ಬೇಡಿಕೆಯನ್ನು ಸರಿದೂಗಿಸಲು ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚ್ಚುವರಿಯಾಗಿ 100 ಬಸ್ ಗಳ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯ ಪ್ರಯೋಜನ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ದೊರಕಿಸುವ ಉದ್ದೇಶದಿಂದ, ಜಿಲ್ಲೆಯಿಂದ ಹೊರಗೆ ದೂರದ ಟ್ರಿಪ್ ಗಳಿಗೆ ಸಂಚರಿಸುತ್ತಿದ್ದ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿ ಜಿಲ್ಲೆಯೊಳಗೆ ಅದರಲ್ಲೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬಸ್ ಗಳ ಸಂಚಾರವನ್ನು ಅಧಿಕಗೊಳಿಸಲಾಗಿದೆ.

ಇದನ್ನೂ ಓದಿ:ಕೋಸ್ಟ್‌ ಗಾರ್ಡ್‌ ನಿಂದ 8 ಹೊಸ ಹೊಸ ಹೆಲಿಕಾಫ್ಟರ್‌ಗಾಗಿ ಪ್ರಸ್ತಾವನೆ ಸಲ್ಲಿಕೆ
ಯೋಜನೆಯ ಮೂಲಕ ಸಾರಿಗೆ ನಿಗಮಕ್ಕೆ ನಿರೀಕ್ಷಿತ ಆದಾಯ ವೃಧ್ದಿಯಾಗಿದ್ದು, ಶೇ. 30 ಕ್ಕೂ ಅಧಿಕ ಪ್ರಗತಿ ಹೊಂದಿದೆ. ಮಾಸಿಕ ಆದಾಯ 50 ಲಕ್ಷದಿಂದ 70 ಲಕ್ಷ ರೂ ಗಳಿಗೂ ಅಧಿಕ ಆದಾಯದ ನಿರೀಕ್ಷೆ ಇದೆ.
ಕೊರತೆಯಿರುವ ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿಗಳ ನೇಮಕಕ್ಕೆ ಕೂಡಾ ಬೇಡಿಕೆ ಸಲ್ಲಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ತಿಳಿಸಿದ್ದಾರೆ.

ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಬಸ್ ಗಳ ಸಂಚಾರದಲ್ಲಿ ಕೊರತೆ ಆಗುತ್ತಿರುವ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಶಾಲಾ ಅವಧಿಯಲ್ಲಿ ಬಸ್ ಗಳಲ್ಲಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಕುರಿತು ಗಮನಕ್ಕೆ ಬಂದಿದೆ. ಯಾವುದೇ ಸಂದರ್ಭದಲ್ಲೂ ಶಾಲೆಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಬೇಡಿಕೆಗನುಗುಣವಾಗಿ ಜಿಲ್ಲೆಗೆ ಹೊಸ ಬಸ್ ಗಳನ್ನು ಪಡೆಯುವಂತೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net