

ಶನಿವಾರಸಂತೆ: ಸರ್ಕಾರಿ ಕೆರೆ ಒತ್ತುವರಿ ಮಾಡಿಕೊಳ್ಳುವುದರ ಜತೆಗೆ ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ಕಾಲುವೆ ಮೂಲಕ ಪೋಲು ಮಾಡಿ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ವ್ಯಕ್ತಿಯೊಬ್ಬರು ವ್ಯವಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಲೂರು-ಸಿದ್ದಾಪುರ ಗ್ರಾಮಸ್ಥರು ಸೋಮವಾರ ತಹಸೀಲ್ದಾರ್ ಶ್ರೀಧರ್ ಮತ್ತು ಸೋಮವಾರಪೇಟೆ ತಾಲೂಕು ಪಂಚಾಯಿತಿ ಇಒ ಪರಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದರು.
ಆಲೂರು-ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಆಲೂರು ಗ್ರಾಮದ ಸರ್ಕಾರಿ ಆಸ್ಪತ್ರೆ ಸಮೀಪದ ಸರ್ವೇ ನಂ.5/3 ರ ಜಾಗದಲ್ಲಿ ಊರು ಗೌಡನ ಕೆರೆ ಎಂಬ ಹೆಸರಿನಲ್ಲಿ ಸರ್ಕಾರಿ ಕೆರೆ ನಿರ್ಮಿಸಲಾಗಿತ್ತು. ಸರ್ಕಾರ 5 ವರ್ಷಗಳ ಹಿಂದೆ ಕೆರೆಯನ್ನು ದುರಸ್ತಿಗೊಳಿಸಿ ಅಭಿವೃದ್ಧಿ ಪಡಿಸಿತ್ತು. ಅಲ್ಲದೆ ಕೆರೆ ನೀರನ್ನು ಅಕ್ಕಪಕ್ಕದ ಜಮೀನಿನ ರೈತರು ಉಪಯೋಗಿಸುತ್ತಿದ್ದರು. ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿತ್ತು.
ಈ ನಡುವೆ ಕೆರೆ ಕೆಳ ಭಾಗದಲ್ಲಿ ಜಮೀನು ಹೊಂದಿರುವ ವ್ಯಕ್ತಿಯೊಬ್ಬರು ಕೆರೆಗೆ ಸೇರಿದ ಸುಮಾರು 1 ಎಕರೆಯಷ್ಟು ಜಮೀನನ್ನು ಒತ್ತುವರಿ ಮಾಡಿಕೊಂಡು ವ್ಯವಸಹಾಯ ಮಾಡುತ್ತಿರುವುದರ ಜತೆಗೆ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗಲು ಬಿಡುತ್ತಿಲ್ಲ. ಅಲ್ಲದೆ ಕೆರೆ ನೀರು ಹೊರ ಬರಲೆಂದು ಕಾಲುವೆ ತೆಗೆದಿದ್ದಾರೆ. ಇದರಿಂದ ನೀರು ಪೋಲಾಗುತ್ತಿದೆ. ಕೆರೆಯಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗುವವರೆಗೂ ನೀರನ್ನು ಕಾಲುವೆಗೆ ಬಿಡುತ್ತಾರೆ. ನಂತರ ಕೆರೆ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ವ್ಯವಸಾಯ ಮಾಡುತ್ತಾರೆ. ಈ ಬಗ್ಗೆ ಅಕ್ಕಪಕ್ಕದ ರೈತರು ಕಂದಾಯ ಇಲಾಖೆ, ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ವಹಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂತಿಮವಾಗಿ ರೈತರಾದ ಕೆ.ಪಿ.ಕುಮಾರ್, ಕೆ.ಎಸ್.ಕಿರಣ್, ಸಿ.ಎನ್.ಬೋಜಪ್ಪ ಗ್ರಾಮಸ್ಥರ ಪರವಾಗಿ ಕೆರೆ ಉತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸುವಂತೆ ಮನವಿ ನೀಡಿದ್ದಾರೆ.