

ಕನಕಗಿರಿ: ಪಟ್ಟಣದಲ್ಲಿ ಶಾಸಕ ಬಸವರಾಜ ದಢೇಸುಗೂರು ಬುಧವಾರ ಚುನಾವಣಾಧಿಕಾರಿ ಸಮೀರ್ ಮುಲ್ಲಾಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ರಾಜಬೀದಿಯಲ್ಲಿನ ತೇರಿನ ಹನುಮಪ್ಪನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶಾಸಕ ದಢೇಸುಗೂರು, ನಂತರ ಬೆಂಬಲಿಗರು ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು.
ರಾಜಬೀದಿ ಮೂಲಕ ಕನಕಾಚಲಪತಿ ದೇವಸ್ಥಾನ, ಬಸ್ ನಿಲ್ದಾಣದ ಮೂಲಕ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿವರೆಗೆ ಸಾಗಿತು. ಶಾಸಕರ ನಾಮಪತ್ರ ಸಲ್ಲಿಕೆ ವೇಳೆ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ನಾಗಪ್ಪ ಸಾಲೋಣಿ ಸೇರಿ ಪಕ್ಷದ ಮುಖಂಡರು ಇದ್ದರು.
ಶಾಸಕ ದಢೇಸುಗೂರು ಮಾತನಾಡಿ, ಕಳೆದ ಚುನಾವಣೆಯಂತೆಯೇ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರ ಬೆಂಬಲ ವ್ಯಕ್ತವಾಗಿದೆ. ಬಿ ಫಾರ್ಮ್ ಹಂಚಿಕೆ ವಿಚಾರವಾಗಿ ಕೆಲ ಗ್ರಾಮಗಳಲ್ಲಿ ವಿರೋಧವಾಗಿದ್ದರೂ ಬಹುತೇಕ ಎಲ್ಲ ಕಡೆಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹಲವರು ಸೇರಿಕೊಂಡಿದ್ದು, ಮತ್ತೆ ಶಾಸಕನಾಗಿ ಆಯ್ಕೆಯಾಗುವುದು ನಿಶ್ಚಿತ ಎಂದು ಕಾರ್ಯಕರ್ತರೇ ಹೇಳುತ್ತಿದ್ದಾರೆ. ಮಾಜಿ ಸಿಎಂ ಬಿಎಸ್‌ವೈ, ಯುವ ನಾಯಕ ಬಿ.ವೈ ವಿಜಯೇಂದ್ರ ಹಾಗೂ ಸಾರಿಗೆ ಸಚಿವರ ಜತೆ ಕೇಂದ್ರದ ನಾಯಕರು ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.ಬಿಜೆಪಿ ತೊರೆದಿರುವ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಅವರಿಂದ ಪಕ್ಷಕ್ಕೆ ಹಾನಿಯಾಗಲ್ಲ. ಅವರಷ್ಟೇ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಎಂದು ತಿಳಿಸಿದರು.