ಒತ್ತುವರಿ ತೆರವು ಸಂಬಂಧ ಸಭೆ ಆಯೋಜಿಸಿ: ಉಪವಿಭಾಗಾಧಿಕಾರಿ ಶಿವಮೂರ್ತಿಗೆ ಮನವಿ

Submission of appeal to Sub Divisional Officer Shivamurthy Mandya
Published on

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಸೇರಿದ 18ಎಕರೆ ಭೂಮಿ ಒತ್ತುವರಿಯನ್ನು ತೆರವುಗೊಳಿಸುವ ಸಂಬಂದ ಅಗತ್ಯ ಸಭೆಯನ್ನು ಆಯೋಜಿಸುವಂತೆ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮತ್ತು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮನವಿ ನೀಡಿದ್ದು, ಜು.1ರಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಂಡ್ಯ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಿದ್ದು ಮೆಡಿಕಲ್ ಕಾಲೇಜು ಒತ್ತುವರಿ ತೆರವು ಸಂಬಂದ ಅಗತ್ಯ ಕ್ರಮಕ್ಕೆ ಆದೇಶಿಸಿದ್ದಾರೆ. ಆದರೆ ಸಮಿತಿ ರಚನೆಯಾಗಿ 50 ದಿನ ಕಳೆದಿದ್ದು, ಒತ್ತುವರಿ ತೆರವು ಸಂಬಂಧ ಆಗಿರುವ ಬೆಳವಣಿಗೆಗಳನ್ನು ಮಂಡ್ಯದ ನಾಗರಿಕರಿಗೆ ತಿಳಿಸಬೇಕಿದೆ. ಈಗಾಗಲೇ ಕಿಷ್ಕಿಂಧವಾಗಿರುವ ಮೆಡಿಕಲ್ ಕಾಲೇಜು ವಿಸ್ತರಣೆ ಅತ್ಯಾವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಮಿತಿ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ಸಮಿತಿಯ ಸದಸ್ಯರ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ, ಈಗಾಗಲೇ ಗೂಗಲ್ ಸರ್ವೇ ಅರ್ಧದಷ್ಟು ಮುಗಿದಿದೆ. 1941 ಹಾಗೂ 1948 ರಲ್ಲಿ ಎರಡು ಹಂತದಲ್ಲಿ ಆಸ್ಪತ್ರೆಗೆ ಜಾಗ ಭೂಸ್ವಾಧೀನವಾಗಿದ್ದು, ಕಚೇರಿಯ ಲಭ್ಯ ದಾಖಲೆಗಳ ಆಧಾರದಲ್ಲಿ ಸರ್ವೇ ನಡೆದಿದೆ. ಸಂಪೂರ್ಣ ಪ್ರಕ್ರಿಯೆ ಮುಗಿದೊಡನೆ ವರದಿಯೊಂದಿಗೆ ಸಭೆ ಆಯೋಜಿಸಲಾಗುವುದು. ಅಂತೆಯೇ ಆ ಪ್ರದೇಶದಲ್ಲಿ ಯಾವುದೆ ಖಾತೆ ಬದಲಾವಣೆ ಮಾಡದಂತೆ ನಗರಸಭೆ ಆಯುಕ್ತರಿಗೆ ಮೌಖಿಕವಾಗಿ ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net