ಮುಳುಗಿದ ಕಂಪ್ಲಿ ಸೇತುವೆ

kampli Birdge flood
ಕಂಪ್ಲಿ ತುಂಗಭದ್ರಾ ನದಿ ಸೇತುವೆ ಮುಳುಗಡೆಯಾಗಿರುವುದು.
Published on

ಕಂಪ್ಲಿ: ತುಂಗಭದ್ರಾ ನದಿಗೆ 1.20ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಶುಕ್ರವಾರ ರಾತ್ರಿ ಸೇತುವೆ ಸಂಪೂರ್ಣ ಮುಳುಗಿದೆ. ಜಲಸಸ್ಯಗಳು ಸೇತುವೆಯ ರಕ್ಷಣಾ ಕಂಬಿಗಳಿಗೆ ಅಡರಿ ನಿಂತಿವೆ.

ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಮೀನುಗಾರ ಶಂಕ್ರಪ್ಪ, ವರಲಕ್ಷ್ಮೀ, ಚಿದಾನಂದ, ಯಂಕಪ್ಪ ಸೇರಿ ಐದು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ತೆಪ್ಪದಲ್ಲಿ ಅಗತ್ಯ ಸಾಮಗ್ರಿ ಸಾಗಿಸಲಾಯಿತು.

ನದಿ ಪಾತ್ರದ ಕೃಷಿಭೂಮಿಗೆ ನೀರು ನುಗ್ಗಿದೆ. ಇದರಿಂದ ಅಕ್ಕಿಸೋಮಪ್ಪ ಬೆಳೆದ ಆರ್‌ಎನ್‌ಆರ್ ಗಿಡ್ಡ ಭತ್ತ, ಸೊಪ್ಪು ಜಲಾವೃತಗೊಂಡಿದೆ. ಉತ್ತರಾದಿ ಕ್ರಿಯೆಯ ಮಂಟಪ, ಹೊಳೆ ಆಂಜನೇಯ ಗುಡಿ, ಮಾಧವ ತೀರ್ಥರ ಬೃಂದಾವನ ಸುತ್ತ ನೀರು ಆವರಿಸಿದೆ.

ಸೇತುವೆ ಬಳಿಯ ಸರ್ಕಾರಿ ಹಿಪ್ರಾ ಶಾಲೆಗೆ ರಜೆ ನೀಡಲಾಗಿದೆ. ಹೊಳೆ ನೋಡಲು ಬಂದವರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದು ಪೊಲೀಸರೊಂದಿಗೆ ವಾಗ್ವಾದ ನಡೆಸುವುದು ಸಾಮಾನ್ಯವಾಗಿದೆ.

ಕೋಟೆಯೊಳಗೆ ಬರುವವರು ತೆಪ್ಪದಲ್ಲಿ, ನಡೆದುಕೊಂಡು ಬರುವುದು ಸಾಮಾನ್ಯವಾಗಿತ್ತು. ಮೀನುಗಾರರು ಎಂದಿನಂತೆ ತೆಪ್ಪ ತಯಾರಿಸುವಲ್ಲಿ ನಿರತರಾಗಿದ್ದರು.

ತಹಸೀಲ್ದಾರ್ ಶಿವರಾಜ ಮಾತನಾಡಿ, ಇನ್ನು 40 ಸಾವಿರ ಕ್ಯೂಸೆಕ್ ಹೆಚ್ಚಿನ ನೀರು ಹರಿದು ಬರಲಿದೆ. ತಟದ ಮೀನುಗಾರ ಕುಟುಂಬದವರನ್ನು ಸ್ಥಳಾಂತರಿಸಲು ಮನವೊಲಿಸಲಾಗುತ್ತಿದೆ. ಪ್ರವಾಹ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ನೋಡಲ್ ಅಧಿಕಾರಿ ಕೆ.ದುರುಗಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net