

ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರಾರಂಭಗೊಂಡು 28 ವರ್ಷ ಕಳೆದರೂ ಬ್ಯಾರೇಜ್ ಹಿನ್ನೀರಿಗೆ ಮುಳುಗಡೆ ಪ್ರದೇಶಕ್ಕೆ ಒಳಪಡುವ ಗ್ರಾಮಗಳನ್ನು ಸ್ಥಳಾಂತರಿಸುವ ಕೆಲಸ ನಡೆದಿಲ್ಲ. ಹೀಗಾಗಿ ಬ್ಯಾರೇಜ್‌ನಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ನಿಲುಗಡೆ ಮಾಡಲಾಗುತ್ತಿಲ್ಲ. ಇದರಿಂದಾಗಿ ಈ ಭಾಗದ ಸಾರ್ವಜನಿಕರು ರೈತರು ಕುಡಿಯುವ ನೀರಿಗೆ ಮತ್ತು ಕೃಷಿಗೆ ಸಮರ್ಪಕ ನೀರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ನೆಪ ಹೇಳಿ ಸದ್ಯ ಸಿಂಗಟಾಲೂರು ಬ್ಯಾರೇಜ್‌ನಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ. ಈಗ ನದಿ ಪಾತ್ರದ ಜನರು ಭತ್ತ ಮೊದಲಾದ ಬೆಳೆ ಬೆಳೆದಿದ್ದು ನೀರಿಲ್ಲದೆ ಒಣಗುತ್ತಿವೆ. ನೀರಿನ ಅವಶ್ಯಕತೆ ಹೆಚ್ಚಿದೆ.
ರೈತರು ನೀರು ತೆಗೆದುಕೊಳ್ಳಲು ಹಾಕಲಾದ ಪಂಪ್‌ಸೆಟ್ ಪೈಪ್ ತೆಗೆಯುವಂತೆ ಕೊಪ್ಪಳ ಹಾಗೂ ಗದಗ ಜಿಲ್ಲಾಡಳಿತವು ರೈತರ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗಿವೆ. ಚಳಿಗಾಲದ ಸಂದರ್ಭದಲ್ಲಿ ಭತ್ತವನ್ನು ನಾಟಿ ಮಾಡದಂತೆ ಮೊದಲೇ ತಿಳಿಸಿದ್ದರೆ ರೈತರು ಬಿತ್ತನೆ ಮಾಡುತ್ತಿರಲಿಲ್ಲ. ಈಗ ಬಿತ್ತನೆ ಮಾಡಿದ ಮೇಲೆ ನೀರಿಲ್ಲವೆಂದು ಹೇಳುವುದು ಎಷ್ಟು ಸರಿ? ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡಿಸಿಕೊಂಡು ಕುಡಿಯುವ ನೀರಿನ ಜತೆಗೆ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
1996ರಲ್ಲಿ ಪ್ರಾರಂಭಗೊಂಡ ಸಿಂಗಟಾಲೂರು ನೀರಾವರಿ ಯೋಜನೆಗೆ ಸಾವಿರಾರು ಕೋಟಿ ರೂ.ಖರ್ಚು ಮಾಡಿದೆ. ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, 16 ಟಿಎಂಸಿ ಯಷ್ಟು ನೀರನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಬ್ಯಾರೇಜ್ ಹಿನ್ನೀರಿಗೆ ಒಳಪಡುವ ಗುಮ್ಮಗೋಳ, ಬಿದರಹಳ್ಳಿ, ವಿಠಲಾಪುರ, ಅಲ್ಲಿಪೂರ ಗ್ರಾಮಗಳನ್ನು ಸಮರ್ಪಕವಾಗಿ ಪುನರ್ವಸತಿ ಕಲ್ಪಿಸಿ ಸ್ಥಳಾಂತರಿಸುವ ಕೆಲಸ ಮಾಡದ ಕಾರಣ ಬ್ಯಾರೇಜ್‌ನಲ್ಲಿ ಕೇವಲ 1.82 ಟಿಎಂಸಿ ನೀರು ಸಂಗ್ರಹಿಸುತ್ತಿದೆ. ಇದರಿಂದ ಈಭಾಗದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಮುಳುಗಡೆಗೆ ಒಳಪಡುವ ಗ್ರಾಮಗಳನ್ನು ಸ್ಥಳಾಂತರಿಸುವುದರ ಬಗ್ಗೆ ಹಿಂದಿನಿಂದ ಈವರೆಗೂ ಎಲ್ಲ ಪಕ್ಷದ ಸರ್ಕಾರಗಳು ಗಮನ ಹರಿಸಿಲ್ಲ, ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು.
ಗದಗ ಜಿಲ್ಲಾಡಳಿತ, ಸರ್ಕಾರವು ಗ್ರಾಮಸ್ಥರೊಂದಿಗೆ ಚರ್ಚಿಸಿ ಗ್ರಾಮಗಳನ್ನು ಪುನರ್ವಸತಿಗೆ ಸ್ಥಳಾಂತರಿಸುವ ಕಾರ್ಯ ಮಾಡಬೇಕು. ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಮತ್ತೆ ನೀರಿನ ಸಮಸ್ಯೆಯಾಗದಂತೆ ಈಗಿನಿಂದಲೇ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.