ಕಾಫಿ ತೋಟಗಳಲ್ಲಿ ಕಾಡುಕೋಣಗಳ ಉಪಟಳ

22spt1
ಸೋಮವಾರಪೇಟೆ ಸಮೀಪದ ಹಿರಿಕರ ಗ್ರಾಮದಲ್ಲಿ ಕಾಡುಕೋಣಗಳು ಕಾಫಿ ತೋಟದಲ್ಲಿನ ಗಿಡಗಳನ್ನು ಹಾನಿಪಡಿಸಿರುವುದು.
Published on

ಸೋಮವಾರಪೇಟೆ: ತಾಲೂಕಿನ ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡುಕೋಣಗಳ ಉಪಟಳ ಹೆಚ್ಚಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ.

ನಿಡ್ತ, ಮಾಲಂಬಿ, ಯಡವನಾಡು ಮೀಸಲು ಅರಣ್ಯಗಳಿಂದ ಕಾಡುಕೋಣಗಳು ಬೆಳಗಿನ ಜಾವ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ತಾಕೇರಿ ಗ್ರಾಮದಲ್ಲಿ ಮಹಿಳೆಯೊಬ್ಬರು ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಕಾಡುಕೋಣ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿತ್ತು. ಗಾಯಾಳು ಈಗಲೂ ಚಿಂತಾಜನಕ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಂತರ ಅರಣ್ಯದಂಚಿನ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೃಷಿಕರು ಭಯಪಡುತ್ತಿದ್ದಾರೆ. ಬುಧವಾರ ಬೆಳಗ್ಗೆ ಹಿರಿಕರ ಮತ್ತು ಚಿಕ್ಕಾರ ಗ್ರಾಮಗಳ ತೋಟಗಳಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಫಿ ತೋಟದೊಳಗೆ ಬೆಳಗ್ಗಿನ ಜಾವ ಆಹಾರ ಸೇವಿಸಿ, ಗುದ್ದಾಟ ನಡೆಸಿರುವುದರಿಂದ ಕಾಫಿಗಿಡಗಳು ಹಾಳಾಗಿವೆ.

ಕಾಡಾನೆಗಳ ಕಾಟ ಕಡಿಮೆಯಾದಂತೆ ಕಾಡುಕೋಣಗಳ ಹಾವಳಿ ಪ್ರಾರಂಭವಾಗಿದೆ. ಬೆಳಗ್ಗಿನ ಜಾವ ಕಾಫಿ ತೋಟಗಳಿಗೆ ಕಾಲ್ನಡಿಗೆಯಲ್ಲಿ ತೆರಳಲು ಭಯವಾಗುತ್ತದೆ. ಹಗಲಿನ ವೇಳೆ ಕೆಲಸಕ್ಕೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಅರಣ್ಯ ಇಲಾಖೆ ಕಾಡಕೋಣಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಕಾಫಿ ಬೆಳೆಗಾರ ಎಚ್.ಪಿ.ತ್ರಿಲೋಕ್ ಒತ್ತಾಯಿಸಿದ್ದಾರೆ.

ಕಾಡುಕೋಣಗಳು ಕಾಫಿ ತೋಟವನ್ನು ಅರಣ್ಯ ಎಂದೇ ಭಾವಿಸುತ್ತದೆ. ಚಿಗುರು ಹುಲ್ಲು ಮೇಯಲು ಬರುತ್ತವೆ. ಕಾಡುಕೋಣ ಬಂದಾಗ ರೈತರು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಕಾಫಿ ತೋಟದಲ್ಲಿ ಇರುವಿಕೆ ಗೊತ್ತಾದರೆ ದೂರವಿರಬೇಕು. ಕಂಡರೆ ದಾಳಿ ಮಾಡುತ್ತವೆ. ಎರಡು ಮೂರು ದಿನ ತೋಟದೊಳಗೆ ಇದ್ದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಆಗ ಸಿಬ್ಬಂದಿ ಬಂದು ಕಾಡಿಗೆ ಓಡಿಸಲಿದ್ದಾರೆ.
ಗಾನಶ್ರೀ ಆರ್‌ಎಫ್‌ಒ, ಶನಿವಾರಸಂತೆ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net