

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕ ಸಬ್ ಜೈಲ್ ವಾಸ್ತುಶಿಲ್ಪದ ದಾಖಲಾತಿ ಪ್ರದರ್ಶನ ಡಿ.9ರಂದು ಸಾಯಂಕಾಲ 5 ಗಂಟೆಗೆ ಸಿಟಿ ಬಸ್ ಸ್ಟಾಡ್ ಬಳಿಯಿರುವ ಚಿತ್ರಕಲಾ ಮಂದಿರ ಕಲಾಶಾಲೆಯ ಜಂಗಮ ಮಠದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.
ಉಡುಪಿಯ ಪಾರಂಪರಿಕ ಕಟ್ಟಡಗಳ ಪೈಕಿ ಒಂದೆನಿಸಿರುವ ಈ ಸಬ್ ಜೈಲು 1906ರಲ್ಲಿ ಕಟ್ಟಲಾಗಿದ್ದು, 2009ರ ತನಕ ಈ ಕಟ್ಟಡದಲ್ಲಿ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಇತ್ತೀಚೆಗೆ ಈ ಕಟ್ಟಡವನ್ನು ಕೆಡವಿ ಹೊಸ ನಗರಸಭೆ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಕಟ್ಟಡದ ಐತಿಹಾಸಿಕ ಅಸ್ತಿತ್ವವನ್ನು ದಾಖಲಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇದರ ಜೊತೆಗೇ ಬ್ರಿಟಿಷ್ ಆಡಳಿತ ಕಾಲದಲ್ಲಿಯೇ ನಿಮಾರ್ಣಗೊಂಡು ಇಂದಿಗೆ ಪರ್ಯಾಯ ಬಳಕೆಯಲ್ಲಿರುವ ಭಾರತದ ಮೂರು ಪ್ರಮುಖ ಜೈಲುಗಳಾದ ಅಂಡಮಾನ್ ಸೆಲ್ಯುಲಾರ್ ಜೈಲ್, ಕಲ್ಕತ್ತಾದ ಅಲಿಫೋರ್ ಜೈಲ್ ಹಾಗೂ ಬೆಂಗಳೂರಿನ ಜೈಲುಗಳನ್ನು ಯಾವ ರೀತಿಯಲ್ಲಿ ಸಂರಕ್ಷಣೆಯನ್ನು ಮಾಡಿಕೊಳ್ಳುತ್ತ ಮರು ಬಳಕೆ ಮಾಡಲಾಗುತ್ತಿದೆ ಎಂಬುದರ ಚಿತ್ರಣವನ್ನು ಪ್ರದರ್ಶಿಸಲಾಗುತ್ತಿದೆ.
ನಗರಸಭೆ ಪೌರಾಯುಕ್ತ ರಾಯಪ್ಪ, ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕ ಡಾ. ಯು.ಸಿ ನಿರಂಜನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇಂಟ್ಯಾಕ್ ಮಂಗಳೂರು ವಿಭಾಗದ ಕನ್ವೀನಿಯರ್ ಆರ್ಕಿಟೆಕ್ಟ್ ಸುಭಾಷ್ಚಂದ್ರ ಬಸು ಹಾಗೂ ಸದಸ್ಯರಾದ ಕಲಾವಿದ ಡಾ. ಜನಾರ್ದನ ಹಾವಂಜೆ ಮತ್ತು ಆರ್ಕಿಟೆಕ್ಟ್ ಶರ್ವಾಣಿ ಭಟ್ ಉಪಸ್ಥಿತರಿರುತ್ತಾರೆ. ಛಾಯಾಚಿತ್ರಗಳು, ವಾಸ್ತು ವೈಶಿಷ್ಟ್ತ್ರ್ಯತೆ ಪ್ರದರ್ಶನ ಡಿ.11ರವರೆಗೆ ಸಾಯಂಕಾಲ 3ರಿಂದ 7ರ ತನಕ ನಡೆಯಲಿದೆ.