

ಮಂಡ್ಯ: ನೊಂದ ಜನಗಳ ಜತೆ ನಮ್ಮ ಹೆಜ್ಜೆ ಎನ್ನುವ ಘೋಷ ವಾಕ್ಯದೊಂದಿಗೆ ಹಲವು ವರ್ಷದಿಂದ ರಕ್ತದಾನ ಶಿಬಿರ ಆಯೋಜಿಸುತ್ತಿರುವ ಜೀವಧಾರೆ ಟ್ರಸ್ಟ್‌ನ ಮತ್ತೊಂದು ಶಿಬಿರ ಅಭೂತಪೂರ್ವ ಯಶಸ್ಸು ಕಂಡಿದೆ. ಒಂದೇ ದಿನದಲ್ಲಿ ಬರೋಬರಿ 750 ಜನರು ರಕ್ತದಾನ ಮಾಡಿದರು.
ಸೈನಿಕ ಪಿತಾಮಹ ಸುಭಾಷ್ ಚಂದ್ರಬೋಸ್ ಅವರ 127ನೇ ಜಯಂತ್ಯುತ್ಸವದ ಅಂಗವಾಗಿ ನಗರದ ವಿಠ್ಠಲ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಯುವ ಸಮೂಹ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾದರಿಯಾದರು. ಅದರಲ್ಲಿಯೂ ಇದೇ ಮೊದಲ ಬಾರಿಗೆ ಸೈನಿಕರಿಗಾಗಿ ರಕ್ತ ಸಂಗ್ರಹದಂತಹ ಅತ್ಯುತ್ತಮ ಕೆಲಸಕ್ಕೆ ಮುಂದಾಗಲಾಗಿತ್ತು. ಅದರಂತೆ ಸೈನಿಕರಿಗೆ ರಕ್ತ ನೀಡಲು ಯುವಕರು ಪೈಪೋಟಿಗೆ ಬಿದ್ದವರಂತೆ ದಾನ ಮಾಡಿದರು.
ಬೃಹತ್ ರಕ್ತದಾನ ಶಿಬಿರಕ್ಕೆ ಜಿಲ್ಲೆಯ ಸುಮಾರು 127 ಹಳ್ಳಿಯ ಜನರಿಗೆ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ರಕ್ತದಾನ ನಡೆಯಿತು. ವಿಶೇಷವೆಂದರೆ ಈ ಶಿಬಿರದಲ್ಲಿ ಮಂಡ್ಯ, ಚಾಮರಾಜನಗರ, ರಾಮನಗರ, ಹಾಸನ, ಬೆಳಗಾವಿ, ಬೆಂಗಳೂರು, ಮೈಸೂರು ಜಿಲ್ಲೆಯಿಂದ ಆಗಮಿಸಿದವರು ರಕ್ತದಾನ ಮಾಡಿದರು. ಇದರಲ್ಲಿ ಸೈನಿಕರೂ ಕೂಡ ಸೇರಿಕೊಂಡಿದ್ದರು. ಬೆಂಗಳೂರಿನ ಕಮಾಂಡ್ ಹಾಸ್ಟಿಟಲ್ ಏರ್‌ಪೋರ್ಸ್ 50, ಮೈಸೂರಿನ ಕೆ.ಆರ್.ಆಸ್ಪತ್ರೆಗೆ 164 ಹಾಗೂ ಉಳಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಇದರೊಂದಿಗೆ ಉತ್ತಮ ಶಿಬಿರ ಆಯೋಜಿಸಿದ ಹೆಗ್ಗಳಿಕೆ ಜೀವಧಾರೆ ಟ್ರಸ್ಟ್ ಸೇರುವಂತಾಯಿತು. ಇನ್ನು ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆಯಾಗಿ ಮೆಡಲ್ ನೀಡಲಾಯಿತು. ಅಂತೆಯೇ ಊಟದ ವ್ಯವಸ್ಥೆ ಹಾಗೂ ಗಣ್ಯರಿಗೆ ಪುಸ್ತಕ, ಸೈನಿಕರಿಗೆ ತೆಂಗಿನ ಸಸಿ ವಿತರಿಸಲಾಯಿತು.
ಶಿಬಿರಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಶಂಭು ಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ.ಆರ್.ಸುರೇಶ್ ಸೇರಿದಂತೆ ಹಲವರು ಆಗಮಿಸಿ ಶುಭಕೋರಿದರು.
ನಿವೃತ್ತ ಸೈನಿಕರಾದ ಉದಯಕುಮಾರ್, ರವಿ, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಹನುಮೇಶ್, ತರುಣ್ ಹೊನ್ನೇನಹಳ್ಳಿ, ಪ್ರಶಾಂತ್, ತರಕಾರಿ ಮಹೇಶ್, ಎ.ವಿ.ರುದ್ರೇಶ್, ಸುನೀಲ್, ಚಂದ್ರಶೇಖರ್, ಬಸವರಾಜು ಮಾರಸಿಂಗನಹಳ್ಳಿ, ಶಶಿಕುಮಾರ್, ಸಚಿನ್ ಹುಂಜನಕೆರೆ, ಚಂದು ಲಾಳನಕೆರೆ ಇತರರಿದ್ದರು.