

ಹನೂರು : ತಾಲೂಕಿನ ಗೋಪಿಶೆಟ್ಟಿಯೂರು ಗ್ರಾಮದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಹಿರಿಯ ಶ್ರೀ ಸುಬ್ಬೇದೇವರು ಸ್ವಾಮೀಜಿ ಅವರ 15ನೇ ವರ್ಷದ ಶಿವಗಣಾರಾಧನಾ ಮಹೋತ್ಸವ ಸೋಮವಾರ ನಡೆಯಿತು.
ಶ್ರೀ ಸೋಮಶೇಖರ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೇವನೂರು ಶ್ರೀ ಗುರುಮಲ್ಲೇಶ್ವರ ಮಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಅವರ ಪಾದ ಪೂಜೆಯನ್ನು ಮಹದೇಶ್ವರಬೆಟ್ಟದ ಸಾಲೂರು ಬೃಹನ್ಮಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಸಲಾಯಿತು.
ರಾಮಾಪುರ, ಗೋಪಿಶೆಟ್ಟಿಯೂರು, ಗೆಜ್ಜಲನತ್ತ ಗ್ರಾಮಗಳ ಭಕ್ತರಲ್ಲದೆ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ವಿವಿಧ ಗ್ರಾಮಗಳ ಭಜನಾ ತಂಡಗಳು ಭಾಗವಹಿಸಿ ಆರಾಧನೋತ್ಸವಕ್ಕೆ ಮತ್ತಷ್ಟು ಮೆರಗು ತಂದವು. ಮಧ್ಯಾಹ್ನ ಮಠದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಡಿಗುಂಡ ವಿರಕ್ತ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ, ಗುಂಡೇಗಾಲ ಪಟ್ಟದ ಮಠಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕುಂತೂರು ಸೂರ್ಯ ಸಿಂಹಾಸನ ಮಠಾಧ್ಯಕ್ಷ ಶ್ರೀ ಶಿವಪ್ರಭು ಸ್ವಾಮೀಜಿ, ಕಾಮಗೆರೆ ಪಟ್ಟದ ಮಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗೋಪಿಶೆಟ್ಟಿಯೂರು ಪಟ್ಟದ ಮಠಾಧ್ಯಕ್ಷ ಶ್ರೀ ಬಸವಣ್ಣ ಸ್ವಾಮೀಜಿ, ಚಿಕ್ಕಿಂದುವಾಡಿ ಪಟ್ಟದ ಮಠದ ಶ್ರೀ ಬಾಲ ಷಡಕ್ಷರ ಸ್ವಾಮೀಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು.