ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಸ‘ಕಾಲ’ದಲ್ಲಿ ಸಿಗದ ದಾಖಲೆ: ಇಸಿ, ಸಿಸಿ ಪಡೆಯಲು ಸಾರ್ವಜನಿಕರ ಪರದಾಟ

Sub-Registrar Office mandya
Published on

ಮಂಡ್ಯ: ನಿವೇಶನಗಳ ಮಾರಾಟ, ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅಗತ್ಯವಾಗಿರುವ ಇಸಿ(ಋಣಭಾರ ಪ್ರಮಾಣ ಪತ್ರ) ಮತ್ತು ಸಿಸಿ(ದೃಢೀಕರಣ ನಕಲು) ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಪಡೆಯಲು ಜನರು ಪರದಾಡುವಂತಾಗಿದೆ.

ಕಳೆದ ಕೆಲ ದಿನದಿಂದ ಇಸಿ, ಸಿಸಿ ದಾಖಲೆ ಪಡೆಯಲು ಸಾಧ್ಯವಾಗದ ಪರಿಣಾಮ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಗಮನಹರಿಸದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಾಗಿದೆ.

100ಕ್ಕೂ ಹೆಚ್ಚು ಅರ್ಜಿ: ನಿವೇಶನಗಳನ್ನು ಮಾರಾಟ ಮಾಡಲು, ಬದುಕಿನ ಅವಶ್ಯಕತೆಗೆ ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳಲು ಹಾಗೂ ಇ ಸ್ವತ್ತು ಮಾಡಿಸಿಕೊಳ್ಳುವುದು ಸೇರಿದಂತೆ ಹಲವು ಕಾರಣಕ್ಕೆ ಋಣಭಾರ ಪ್ರಮಾಣ ಪತ್ರ ಹಾಗೂ ದೃಢೀಕರಣ ನಕಲಿನ ದಾಖಲೆ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಮಂಡ್ಯ ತಾಲೂಕಿನಲ್ಲಿಯೇ 100ಕ್ಕೂ ಹೆಚ್ಚು ಅರ್ಜಿಗಳು ಸಬ್‌ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಕೆಯಾಗುತ್ತಿವೆ. ಆದರೆ ಸರಿಯಾದ ಸಮಯಕ್ಕೆ ದಾಖಲೆ ಸಿಗುತ್ತಿಲ್ಲ.

ಋಣಭಾರ ಪ್ರಮಾಣ ಪತ್ರಕ್ಕೆ ಒಂದು ವರ್ಷದ ದಾಖಲೆಗೆ 40 ರೂ ಶುಲ್ಕ ಪಾವತಿಸಬೇಕು. ಹೆಚ್ಚುವರಿ ಅವಶ್ಯಕತೆ ಇದ್ದರೆ ಪ್ರತಿ ವರ್ಷಕ್ಕೆ 10 ರೂನಂತೆ ಶುಲ್ಕ ಕೊಡಬೇಕು. ಇನ್ನು ದೃಢೀಕರಣ ನಕಲಿಗೂ ಶುಲ್ಕ ಇದೆ. ಅಂದರೆ ಪ್ರತಿ ಪುಟಕ್ಕೆ 10 ರೂ ಹಾಗೂ ಅರ್ಜಿ ಸಲ್ಲಿಕೆಗೆ 10 ರೂ ಇದೆ. ಆದರೆ ಸರ್ಕಾರಿ ಶುಲ್ಕ ಪಾವತಿಸಿದರೂ ದಾಖಲೆ ಪಡೆಯಲು ಜನರು ಯುದ್ಧ ಮಾಡಿದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಇದಕ್ಕೆ ಅಧಿಕಾರಿಗಳಿಂದ ಸರಿಯಾದ ಕಾರಣವೂ ಇಲ್ಲ. ಗಮನಾರ್ಹ ಅಂಶವೆಂದರೆ ಈ ದಾಖಲೆಗಳನ್ನು ಸಕಾಲದಲ್ಲಿ ಐದು ದಿನದೊಳಗೆ ಕೊಡಬೇಕೆನ್ನುವ ನಿಯಮವಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

ಮೊದಲೇ ಸಬ್‌ರಿಜಿಸ್ಟ್ರಾರ್ ಕಚೇರಿ ಎಂದರೆ ಜನಸಾಮಾನ್ಯರ ಕೆಲಸವಾಗುವುದು ಸುಲಭವಲ್ಲ ಎನ್ನುವ ಮಾತಿದೆ. ಇದರಲ್ಲಿ ಸಣ್ಣಪುಟ್ಟ ದಾಖಲೆ ಪಡೆಯುವುದು ದುಸ್ಥರವಾಗಿರುವುದು ದುರಂತ. ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭಯವಿಲ್ಲದೆ ಇಷ್ಟಬಂದಂತೆ ಅಧಿಕಾರಿ, ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಿದೆ.

ಸರ್ವರ್ ಸಮಸ್ಯೆಯ ಸಬೂಬು

ದಾಖಲೆ ಪಡೆಯಲು ಜನರು ಬಂದರೆ ಅಧಿಕಾರಿಗಳಿಂದ ಸಿಗುವ ಉತ್ತಮ ಸರ್ವರ್ ಸಮಸ್ಯೆ. ಇದೊಂದು ಮಾತನ್ನು ಕೇಳಿ ಎರಡು ಮೂರು ದಿನ ಬಿಟ್ಟು ಬನ್ನಿ ಎನ್ನುವ ಕೆಟ್ಟಚಾಳಿ ನಡೆಯುತ್ತಿದೆ. ಆದರೆ ಇದರಿಂದಾಗುತ್ತಿರುವ ತೊಂದರೆ ಕಡಿಮೆಯೇನಲ್ಲ. ದೂರದ ಹಳ್ಳಿಗಳಿಂದ ಬೆಳಗ್ಗೆಯೇ ಬರುವ ರೈತ ಅಥವಾ ಜನರು ಒಂದು ಸಣ್ಣ ದಾಖಲೆ ಪಡೆಯಲು ಸಂಜೆವರೆಗೂ ಕಾದು ವಾಪಸ್ ಹೋಗಬೇಕಿದೆ. ಮತ್ತೊಂದು ದಿನ ಬಂದರೂ ದಾಖಲೆ ಸಿಗುತ್ತದೆಯೇ ಎನ್ನುವ ಖಚಿತತೆಯೂ ಇಲ್ಲ. ನಗರದ ಕಚೇರಿಯಲ್ಲಿ ಕುಳಿತು ಮೌಖಿಕ ಆದೇಶ ಹೊರಡಿಸುವ ಅಧಿಕಾರಿ, ನೌಕರರಿಗೆ ಹಳ್ಳಿ ಜನರ ಸಮಸ್ಯೆಗೆ ಸ್ಪಂದಿಸಬೇಕೆನ್ನುವ ಕನಿಷ್ಟ ಕಾಳಜಿ ಇಲ್ಲದಿರುವುದು ದುರಂತ.

ಸರ್ವರ್ ಸಮಸ್ಯೆ ಹೇಳಿಕೊಂಡು ಜನರನ್ನು ವಾಪಸ್ ಕಳುಹಿಸುವ ಅಧಿಕಾರಿ, ನೌಕರರು ಎಲ್ಲರ ವಿಚಾರದಲ್ಲಿಯೂ ಇದೇ ರೀತಿ ಇರುವುದಿಲ್ಲ. ಕೆಲವರಿಗೆ ಹಾಕಿದ ದಿನವೇ ಅಥವಾ ಮರುದಿನವೇ ದಾಖಲೆ ಕೊಡುತ್ತಾರೆನ್ನುವುದು ಬಹಿರಂಗ ಸತ್ಯ. ಆದರೆ ಇದು ಎಲ್ಲರ ವಿಚಾರದಲ್ಲಿ ಏಕೆ ಅನ್ವಯಿಸುವುದಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net