

ಮಂಗಳೂರು: ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಕೊಟ್ಟಿರುವ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಸೈಬರ್ ವಂಚನಾ ಪ್ರಕರಣ ಮುಂದುವರಿದಿದ್ದು, ಒಂದು ತಿಂಗಳು ಅಂತರದಲ್ಲಿ 8ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಎಎಸ್‌ಐ ಆಗಿರುವ ಆಲ್ಬರ್ಟ್ ಲಸ್ರಾದೋ ಹಣ ಕಳಕೊಂಡವರಲ್ಲಿ ಒಬ್ಬರಾಗಿದ್ದು ವಂಚನೆ ಬಗ್ಗೆ ಸೈಬರ್ ಅಪರಾಧಗಳ ಠಾಣೆಗೆ ದೂರು ನೀಡಿದ್ದಾರೆ. ಆಲ್ಬರ್ಟ್ ಲಸ್ರಾದೋ ಅವರು ಆ.2ರಂದು ಮಂಗಳೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಾಗ ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಿದ್ದರು. ಅಪರಿಚಿತರು ಈ ತಂತ್ರಾಂಶವನ್ನು ಬಳಸಿಕೊಂಡು ಎಸ್‌ಬಿಐ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 36,890 ರೂಪಾಯಿ ಹಣ ಇವರ ಖಾತೆಯಿಂದ ಕಡಿತ ಆಗಿದೆ ಎಂದು ತಿಳಿದು ಬಂದಿದೆ.
ಆಧಾರ್ ಸೋರಿಕೆ: ಮ್ಯಾಕ್ಸಿಂ ಎಂಬವರು ಸೊಸೈಟಿಯೊದರಲ್ಲಿ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನೀಡಿ ಹಣ ಕಳಕೊಂಡಿದ್ದಾರೆ. ಲೋನ್ ವಿಚಾರದಲ್ಲಿ ಗುರುಪುರದ ಸೊಸೈಟಿ ಒಂದಕ್ಕೆ ತೆರಳಿದ್ದ ಅವರು ಅಲ್ಲಿ ಆಧಾರ್ ಮತ್ತು ಬೆರಳಚ್ಚು ನೀಡಿದ್ದರು. ಅಕ್ಟೋಬರ್ ತಿಂಗಳಾರಂಭದಲ್ಲಿ ದಿನಕ್ಕೆ 5000 ರೀತಿ ಮೂರು ದಿನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಆಧಾರ್ ಕಾರ್ಡ್ ಸೋರಿಕೆಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮ್ಯಾಕ್ಸಿಂ ಕುಟಿನೋ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹತ್ವದ ಮಾಹಿತಿ ಲಭ್ಯ: ರಿಜಿಸ್ಟ್ರೇಷನ್ ಕಚೇರಿಯಲ್ಲಿ ಸೈಬರ್ ದೋಖಾ ಬಗ್ಗೆ ನಗರ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು, ಶೀಘ್ರದಲ್ಲೇ ಈ ಪ್ರಕರಣ ಬಯಲಿಗೆಳೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.