ಸೆಪ್ಟಂಬರ್‌ನೊಳಗೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಪೂರ್ಣ: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಮಾಹಿತಿ

Mlc Madhu G madegowda
Published on

ಮಂಡ್ಯ: ನಾಗಮಂಗಲ ತಾಲೂಕು ಆದಿಚುಂಚನಗಿರಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು 7 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಎಂಎಲ್‌ಸಿ ಮಧು ಜಿ.ಮಾದೇಗೌಡ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 2025ರ ಸೆಪ್ಟೆಂಬರ್ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಅಲ್ಲದೆ, ಚಾಮರಾಜನಗರದಲ್ಲಿ 8 ಕೋಟಿ ರೂ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಹಾಸನದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯವನ್ನು 10.50 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದಿದ್ದಾರೆ.

ಈ ಕಾಮಗಾರಿಗಳನ್ನು ವೇಗಗೊಳಿಸಲು ಕೇಂದ್ರದ ಅಧ್ಯಕ್ಷರಾದ ಜಿಲ್ಲಾಧಿಕಾರಿ, ಕೇಂದ್ರದ ನೋಡಲ್ ಅಧಿಕಾರಿ ಹಾಗೂ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಸಂಸ್ಥೆಯೊಂದಿಗೆ ನಿರಂತರವಾಗಿ ಸಮನ್ವಯವನ್ನು ಸಾಧಿಸಲಾಗುತ್ತಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದ್ದಾರೆ.

ವಿಜ್ಞಾನ ಕೇಂದ್ರದಲ್ಲಿ ಏನೇನು ಇರಲಿದೆ?: ವಿನೋದ ವಿಜ್ಞಾನ ಗ್ಯಾಲರಿ, ವಿಷಯಾಧಾರಿತ ಗ್ಯಾಲರಿ, ತರಬೇತಿ ಕೊಠಡಿ, ಕಂಪ್ಯೂಟರ್ ಹಾಗೂ ಗ್ರಂಥಾಲಯ, ಹೊರಾಂಗಣ ವಿಜ್ಞಾನ ಪಾರ್ಕ್ ಮತ್ತು ಚಟುವಟಿಕೆ ಕೊಠಡಿ ಇರಲಿದೆ. ಅಂತೆಯೇ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಪಿ.ಎಚ್‌ಡಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಡಿ.ಎಸ್.ಟಿ-ಪಿ.ಎಚ್‌ಡಿ ಶಿಷ್ಯವೇತನ ಯೋಜನೆಯಡಿ ಆಯ್ಕೆಯಾಗುವ ವಿವಿಧ ವಿಶ್ವವಿದ್ಯಾಲಯ, ಸಂಸ್ಥೆಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ತಲಾ 20 ಸಾವಿರ ರೂ ಮಾಸಿಕ ಶಿಷ್ಯ ವೇತನ ನೀಡಲಾಗುತ್ತಿದೆ. ಇದಕ್ಕಾಗಿ, ವಾರ್ಷಿಕ 3 ಕೋಟಿ ರೂ ಅನುದಾನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net