

ಬೈಲಹೊಂಗಲ: ಸಮೀಪದ ಮುತವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಈಚೆಗೆ ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಮುಖಂಡ ಈರಪ್ಪ ಜರಳಿ ಮಾತನಾಡಿ, ಇಂಚಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತವಾಡ ಗ್ರಾಮದಲ್ಲಿ 1992 ರಲ್ಲಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದ್ದು, ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಕುಸಿಯುವ ಹಂತದಲ್ಲಿದೆ. ಅನಾಹುತು ನಡೆಯುವ ಸಂಭವ ಇದೆ. ಪ್ರತಿನಿತ್ಯ ರಾತ್ರಿ ಶಾಲಾ ಆವರಣದಲ್ಲಿ ಅನೈತಿಕ ಚಟುವಟಕೆಗಳು, ಕುಡುಕರ ಹಾವಳಿ ಹೆಚ್ಚಾಗಿದೆ. ಇದರಿಂದ ಶಾಲಾ ಪರಿಸರ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಶಾಲೆಯ ಶೌಚಗೃಹ ದುರಸ್ತಿ ಕಾರ್ಯ ನಡೆಯಬೇಕಿದೆ. ಸರಿಯಾದ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಮಕ್ಕಳು ರೋಗ, ರುಜಿನಗಳಿಗೆ ಬಲಿಯಾಗುತ್ತಿದ್ದಾರೆ. ಶಾಲೆಯ ಮುಂಭಾಗ ಇಂಚಲ-ನೇಸರಗಿ ಊರುಗಳಿಗೆ ಸಂಪರ್ಕ ಹೊಂದುವ ರಸ್ತೆಯಿದ್ದು, ವಾಹಾನ ಸವಾರರು ಬೇಕಾಬಿಟ್ಟಿ ವಾಹಾನ ಚಲಾವಣೆ ಮಾಡುತ್ತಿದ್ದಾರೆ.
ಇದರಿಂದ ಮಕ್ಕಳ ಜೀವಕ್ಕೆ ಹಾನಿಯಾಗಬಹುದು. ಶಾಲೆಯ ಮುಂದಿನ ರಸ್ತೆಗೆ ತಡೆ ನಿರ್ಮಿಸಿ, ನಿಧಾನವಾಗಿ ಚಲಾಯಿಸುವಂತೆ ಸೂಚನಾ ಫಲಕ ಹಾಕಬೇಕು. ಸುತ್ತಮುತ್ತ ಗಟಾರ ವ್ಯವಸ್ಥೆಯಿಲ್ಲದೆ ಗಬ್ಬೆದ್ದು ನಾರುತ್ತಿದೆ. ಇದರಿಂದ ಮಕ್ಕಳಿಗೆ, ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಸುಸಜ್ಜಿತವಾದ ಕಾಂಪೌಂಡ್ ಗೇಟ್ ನಿರ್ಮಿಸಬೇಕೆಂದು ವಿನಂತಿಸಿದರು.
ಸಾಮಾಜಿಕ ಕಾರ್ಯಕರ್ತ ರಫೀಕ್ ಬಡೇಘರ್, ಡಿಎಸ್‌ಎಸ್ ರಾಜ್ಯಾಧ್ಯಕ್ಷ ಸುರೇಶ ರಾಯಪ್ಪಗೋಳ, ಶಿವಾನಂದ ಕುಲಕರ್ಣಿ, ವಿಷ್ಣು ಭಾವಿಮನಿ, ಮೆಹತಾಬ ಖುದ್ದನ್ನವರ, ದಾದಾಪೀರ್ ಸಂಗೊಳ್ಳಿ, ಜುಬೇರ್ ಮುಜಾವರ, ಯಾಸೀನ್ ಮುಲ್ಲಾ ಉಪಸ್ಥಿತರಿದ್ದರು.