

ನಾಗಮಂಗಲ: ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ಕೊಟ್ಟು ಕಂದಾಯ ಇಲಾಖೆಯ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಚಿವರ ನಡೆ ಗ್ರಾಮ ಪಂಚಾಯತಿ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವ ಬೆನ್ನಲ್ಲೆ ಸಚಿವರ ನಿರ್ದೇಶನದ ಮೇರೆಗೆ ತಾಲೂಕಿನ ದೇವಲಾಪುರ ಹೋಬಳಿಯ ಹದಮಗೆರೆ, ದೊಡ್ಡಹುಪ್ಪಳ, ಸುನಗಹಳ್ಳಿ, ಶೆಟ್ಟಹಳ್ಳಿ ಮತ್ತು ಕುಡುಗಬಾಳು ಗ್ರಾಮಗಳಿಗೆ ಬುಧವಾರ ಭೇಟಿ ಕೊಟ್ಟು ರೈತರು ಪೌತಿ ಖಾತೆ ಮತ್ತು ಆರ್‌ಟಿಸಿ ತಿದ್ದುಪಡಿ ಮಾಡಿಸಿಕೊಳ್ಳಲು ಮುಂದಾಗಬೇಕು. ಪಡಿತರ ಕಾರ್ಡ್‌ಗಳಲ್ಲಿ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದರು.
ಜನಸಾಮಾನ್ಯರಿಗೆ ಜನಸ್ನೇಹಿ ಆಡಳಿತ ನೀಡಲು ಕಂದಾಯ ಇಲಾಖೆ ಬದ್ಧವಾಗಿದೆ. ಕಂದಾಯ ಇಲಾಖೆಯಲ್ಲಿ ಆಗಬೇಕಿರುವ ತಮ್ಮ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳನ್ನು ಆಶ್ರಯಿಸದೆ ನೇರವಾಗಿ ಕಚೇರಿಗೆ ಭೇಟಿ ನೀಡಿ, ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿದರೆ ತಮ್ಮ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಒದಗಿಸಲಾಗುವುದು. ಹಾಗಾಗಿ ಕಂದಾಯ ಇಲಾಖೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಉಪ ತಹಸೀಲ್ದಾರ್ ರವಿಶಂಕರ್, ರಾಜಸ್ವ ನಿರೀಕ್ಷಕ ಮಾದೇಶ್, ಗ್ರಾಮ ಆಡಳಿತಾಧಿಕಾರಿ ಬಸವರಾಜು ಕೊಂಡಜ್ಜಿ ಇದ್ದರು.