

ಆನೇಕಲ್: ಮೈಸೂರು ಸೇರಿ ರಾಜ್ಯದ ಹಲವೆಡೆ ಹಕ್ಕಿಜ್ವರ ಖಾತ್ರಿಯಾದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪಕ್ಷಿಗಳ ಉದ್ಯಾನದ ಆವರಣದಲ್ಲಿ ಬಯೋಸೆಕ್ಯೂರಿಟಿ (ರಾಸಾಯನಿಕ ಮಿಶ್ರಿತ ನೀರು), ಸುಣ್ಣದ ಪುಡಿ ಸಿಂಪಡಣೆ ಮಾಡಲಾಗಿದೆ. ಪಕ್ಷಿಗಳಿಗೆ ಆಹಾರ ನೀಡುವ ಕೀಪರ್‌ಗಳು ಆವರಣದ ಒಳಗೆ ಹೋಗುವಾಗ ಸ್ಯಾನಿಟೈಸರ್ ಹಾಕಿಕೊಂಡು ಕೈ ಸ್ವಚ್ಛ ಮಾಡಿಕೊಳ್ಳಬೇಕು. ಪಾರ್ಕಿನ ಆವರಣದ ಗೇಟಿನ ಬಳಿ ರಾಸಾಯನಿಕ ಮಿಶ್ರಿತ ನೀರು ಸಂಗ್ರಹಿಸಿಡಲಾಗಿದ್ದು (ಬಯೋಸೆಕ್ಯೂರಿಟಿ), ಉದ್ಯಾನಕ್ಕೆ ಬರುವ ವಾಹನ ಹಾಗೂ ಮನುಷ್ಯರು ಈ ನೀರಿನ ಮೂಲಕವೇ ಒಳಗೆ ಹೋಗಬೇಕೆಂಬ ಆದೇಶ ಹೊರಡಿಸಲಾಗಿದೆ.
ಜೈವಿಕ ಉದ್ಯಾನದಲ್ಲಿ 25 ವಿವಿಧ ಪ್ರಭೇದದ 250ಕ್ಕೂ ಹೆಚ್ಚು ಪಕ್ಷಿಗಳಿವೆ. ಉದ್ಯಾನದಲ್ಲಿರುವ ಕೆಲವು ಕೆರೆಗಳಿಗೆ ಹೊರಗಿನಿಂದ ಬರುವ ಪಕ್ಷಿಗಳ ಮೇಲೆ ನಿಗಾ ವಹಿಸಲಾಗಿದೆ. ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬನ್ನೇರುಘಟ್ಟದಲ್ಲಿರುವ ಪಕ್ಷ್ಷಿಗಳ ಹಿಕ್ಕೆಯನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಜೈವಿಕ ಸಂಸ್ಥೆಗೆ ತಪಾಸಣೆಗೆ ಕಳುಹಿಸಲಾಗಿದೆ.
ಕರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ಪ್ರತಿದಿನ ನೀಡುವ ಮಾಂಸವನ್ನು ಬಿಸಿನೀರಿನಿಂದ ಸ್ವಚ್ಛ ಮಾಡಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಹಕ್ಕಿಜ್ವರದ ಹಿನ್ನೆಲೆಯಲ್ಲಿ ಈಗಾಗಲೇ ಭದ್ರತೆ ಕೈಗೊಳ್ಳಲಾಗಿದೆ. ಉದ್ಯಾನದ ಆವರಣದಲ್ಲಿ ಪಕ್ಷಿಗಳು ಇರುವ ಆವರಣ ಬೇರೆ ಜಾಗದಲ್ಲಿರುವುದರಿಂದ ಸೋಂಕು ತಗುಲುವ ಸಾಧ್ಯತೆ ಇಲ್ಲ. ಈಗಾಗಲೇ ಪಕ್ಷಿಗಳ ಹಿಕ್ಕೆಯನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ, ಅಲ್ಲಿಂದ ಮಾಹಿತಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಡಾ.ಉಮಾಶಂಕರ್, ಬನ್ನೇರುಘಟ್ಟ ಪಶು ವೈದ್ಯಾಧಿಕಾರಿ